ಹಿಮಾಚಲ ಪ್ರದೇಶ, ಜ.03 (DaijiworldNews/PY): ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಮನಾಲಿಯಲ್ಲಿ ಭಾರೀ ಹಿಮಪಾತವಾಗಿ 500ಕ್ಕೂ ಅಧಿಕ ಪ್ರವಾಸಿಗರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
"ಅಟಲ್ ಸುರಂಗ ಹಾಗೂ ಸೋಲಾಂಗ್ ನಲ್ಲಾ ನಡುವಿನ ರಸ್ತೆಯಲ್ಲಿ ಸಿಲುಕಿರುವ 500ಕ್ಕೂ ಅಧಿಕ ಪ್ರವಾಸಿಗರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಶೀಘ್ರದಲ್ಲೇ ವಾಹನ ಸಂಚಾರವನ್ನು ಪುನಃಸ್ಥಾಪಿಸಲು ಪ್ರಯತ್ನಿಸಲಾಗುತ್ತಿದೆ" ಎಂದು ಮನಾಲಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ರಾಮನ್ ಘರ್ಸಂಗಿ ಹೇಳಿದ್ದಾರೆ.
ರಕ್ಷಣಾ ತಂಡವು ರಾತ್ರಿ ಸುಮಾರು 8 ಗಂಟೆಯ ವೇಳೆಗೆ 20ಕ್ಕೂ ಅಧಿಕ ವಾಹನಗಳೊಂದಿಗೆ ಸ್ಥಳಕ್ಕೆ ತೆರಳಿದ್ದು, ಸಿಲುಕಿರುವ ಜನರನ್ನು ಸ್ಥಳಾಂತರ ಮಾಡುವ ಸಲುವಾಗಿ 48 ಆಸನಗಳ ಬಸ್ ಅನ್ನು ಕುಲಾಂಗ್ ರವಾನಿಸಲಾಗಿತ್ತು.
ಏತನ್ಮಧ್ಯೆ, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಜ.3ರಿಂದ 5ರ ತನಕ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.