ನವದೆಹಲಿ, ಜ.03 (DaijiworldNews/PY): ನಮ್ಮ ಬೇಡಿಕೆಗಳು ಈಡೇರದೇ ಇದ್ದಲ್ಲಿ ಜ.26ರ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸುತ್ತೇವೆ ಎಂದು ಕೇಂದ್ರ ಸರ್ಕಾರದ ನೂತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಎಚ್ಚರಿಕೆ ನೀಡಿದ್ದಾರೆ.
ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸರ್ಕಾರದ ನಡುವೆ ಜ.4ರಂದು ಏಳನೇ ಸುತ್ತಿನ ಮಾತುಕತೆ ಮಾತುಕತೆ ನಿಗದಿಯಾಗಿದೆ.
ಶನಿವಾರ ಮಾಧ್ಯಮಗೊಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ದರ್ಶನ್ಪಾಲ್ ಸಿಂಗ್, "ಉದ್ದೇಶಿತ ರ್ಯಾಲಿಯನ್ನು ಕಿಸಾನ್ ಪರೇಡ್ ಎನ್ನಲಾಗಿದೆ. ಗಣರಾಜ್
ಗಣರಾಜ್ಯೋತ್ಸವ ಪರೇಡ್ ಬಳಿಕ ಕಿಸಾನ್ ಪರೇಡ್ ಕೈಗೊಳ್ಳಲಾಗುವುದು. ಗಣರಾಜ್ಯೋತ್ಸವವು ಜನಶಕ್ತಿಯ ಸಂಕೇತವಾಗಿದೆ. ಹಾಗಾಗಿ ಗಣರಾಜ್ಯೋತ್ಸವದಂದು ಕಿಸಾನ್ ಪರೇಡ್ ನಡೆಸಲು ತೀರ್ಮಾನ ಮಾಡಿದ್ದೇವೆ" ಎಂದಿದ್ದಾರೆ.
"ಸೋಮವಾರ ನಡೆಯಲಿರುವ ಸಭೆಯ ರೈತ ವಿಚಾರವಾಗಿ ರೈತರಲ್ಲಿ ಹಲವಾರು ನಿರೀಕ್ಷೆಗಳಿವೆ. ಆದರೆ, ಸರ್ಕಾರದ ಮೇಲೆ ನಮಗೆ ಭರವಸೆಯಿಲ್ಲ. ಕಾಯ್ದೆಗಳನ್ನು ಶೀಘ್ರವೇ ಹಿಂತೆದುಕೊಳ್ಳಬೇಕು ಅಥವಾ ಬಲ ಪ್ರಯೊಗದ ಮೂಲಕ ನಮ್ಮನ್ನು ಇಲ್ಲಿಂದ ಖಾಲಿ ಮಾಡಿಸಬೇಕು ಎನ್ನುವ ಎರಡು ಆಯ್ಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೇವೆ" ಎಂದು ರೈತ ಸಂಘಟನೆಯ ನಾಯಕರು ತಿಳಿಸಿದ್ದಾರೆ.
"ಪರೇಡ್ನಲ್ಲಿ ಸಾವಿರಾರು ರೈತರು ಟ್ರ್ಯಾಕ್ಟರ್ಗಳಲ್ಲಿ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡು ಭಾಗವಹಿಸುವರು. ಶೀಘ್ರದಲ್ಲೇ ಪರೇಡ್ನ ಮಾರ್ಗ ಹಾಗೂ ಉಳಿದ ವಿವರಗಳನ್ನು ತಿಳಿಸಲಾಗುವುದು" ಎಂದಿದ್ದಾರೆ.
"ಜ.6ರಂದು ಮನೇಸರ್-ಪಲ್ವಾಲ್ ಹೆದ್ದಾರಿಯಲ್ಲಿ ನಡೆಸಲಿರುವ ರ್ಯಾಲಿಯಲ್ಲಿ ಯಾವುದೇ ರೀತಿಯಾದ ಬದಲಾವಣೆಯಿಲ್ಲ. ಆ ರ್ಯಾಲಿಯನ್ನು ಕಿಸಾನ್ ಪರೇಡ್ನ ಪೂರ್ವಾಭ್ಯಾಸ ಎಂದು ಪರಿಗಣಿಸಲಾಗುವುದು" ಎಂದು ಹೇಳಿದ್ದಾರೆ.