ನವದೆಹಲಿ, ಜ. 02 (DaijiworldNews/MB) : ಭಾರತದಲ್ಲಿ ಆಕ್ಸ್ಫರ್ಡ್ ಯುನಿವರ್ಸಿಟಿ ಹಾಗೂ ಅಸ್ಟ್ರಾಜೆನೆಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆ ಕೋವಿಶೀಲ್ಡ್ನ ತುರ್ತು ಬಳಕೆಗೆ ಅನುಮೋದನೆ ದೊರೆತ ಬೆನ್ನಿಗೆ ಕೇಂದ್ರೀಯ ಔಷಧಿ ನಿಯಂತ್ರಕದ ತಜ್ಞರ ಸಮಿತಿಯು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಗೆ ಕೆಲವು ಷರತ್ತುಗಳೊಂದಿಗೆ ಅನುಮೋದನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಈ ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ದೇಶೀಯವಾಗಿ ಅಭಿವೃದ್ಧಿಪಡಿಸಿದೆ.
ತಮ್ಮ ಲಸಿಕೆ ಅನುಮೋದನೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿ, ವಿಶ್ಲೇಷಣೆಯನ್ನು ಹೈದರಾಬಾದ್ ಮೂಲದ ಔಷಧಿ ಸಂಸ್ಥೆ ಭಾರತ್ ಬಯೋಟೆಕ್ ಸಂಸ್ಥೆಯು ಸಲ್ಲಿಸಿದ ನಂತರ ಶುಕ್ರವಾರ ಮತ್ತೆ ಪರಿಶೀಲನಾ ಸಭೆ ನಡೆಸಲಾಗಿದೆ.
ಕೇಂದ್ರ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸಿಡಿಎಸ್ಸಿಒ) ಕೊರೊನಾ ತಜ್ಞರ ಸಮಿತಿ (ಎಸ್ಇಸಿ) ತುರ್ತು ಬಳಕೆಗೆ ಲಸಿಕೆಗೆ ಅನುಮೋದನೆ ನೀಡುವಂತೆ ಶಿಫಾರಸು ಮಾಡಿದೆ.