ನವದೆಹಲಿ, ಜ. 02 (DaijiworldNews/MB) : ''ಕೊರೊನಾ ಸೋಂಕಿಗೆ ಆಕ್ಸ್ಫರ್ಡ್ ಯುನಿವರ್ಸಿಟಿ ಹಾಗೂ ಅಸ್ಟ್ರಾಜೆನೆಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಭಾರತದಲ್ಲಿ ಅನುಮೋದನೆ ನೀಡಲಾಗಿದೆ'' ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಶನಿವಾರ ತಿಳಿಸಿದರು.
ಈ ಬಗ್ಗೆ ಮಾಹಿತಿ ನೀಡಿರುವ ಸಚಿವರು, ''ತಜ್ಞರ ಸಮಿತಿಯು ಈ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಸಲು ಅನುಮತಿ ನೀಡಿದೆ. ಭಾರತದಲ್ಲಿ ಮೊದಲು ಬಳಕೆಗೆ ಅನುಮತಿ ಪಡೆದ ಲಸಿಕೆ ಇದಾಗಿದೆ'' ಎಂದು ಹೇಳಿದರು.
''ಭಾರತದಲ್ಲಿ ಪುಣೆಯ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಸಂಸ್ಥೆ ಕೋವಿಶೀಲ್ಡ್ ಲಸಿಕೆಯನ್ನು ತಯಾರಿಸುತ್ತಿದೆ. ನಾಲ್ಕು ಲಸಿಕೆಗಳನ್ನು ಅಭಿವೃದ್ಧಿಪಡಿಸಿದ ಜಗತ್ತಿನ ಏಕೈಕ ದೇಶ ಭಾರತ'' ಎಂದು ಕೂಡಾ ಹೇಳಿದರು.
''ಇನ್ನು ಮೂರು ಲಸಿಕೆಗಳು ತುರ್ತು ಬಳಕೆಯ ಅನುಮೋದನೆಗಾಗಿ ಕಾಯತ್ತಿವೆ. ತಜ್ಞರ ಸಮಿತಿಯು ದತ್ತಾಂಶಗಳನ್ನು ಪರಿಶೀಲಿಸುತ್ತಿದೆ. ಅನುಮತಿ ದೊರೆತ ಕೂಡಲೇ ಅನುಮೋದನೆ ನೀಡಲಾಗುವುದು'' ಎಂದು ತಿಳಿಸಿದರು.