ಚಿತ್ರದುರ್ಗ, ಜ. 02 (DaijiworldNews/MB) : ''ಸಚಿವ ಸಂಪುಟ ರಚನೆ ವಿಚಾರದಲ್ಲಿ ಸಿಎಂ ಅವರಿಗೆ ಪರಮಾಧಿಕಾರ ಇದೆ. ಅವರ ನಿರ್ಣಯವೇ ಅಂತಿಮ'' ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದರು.
ಸುದ್ದಿಗಾರಗೊಂದಿಗೆ ಮಾತನಾಡಿದ ಅವರು, ''ಕ್ರಿಕೆಟ್ನಲ್ಲಿ ತಂಡದ ನಾಯಕ ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್, ವಿಕೆಟ್ ಕೀಪರ್ಗಳನ್ನು ನೇಮಕ ಮಾಡುತ್ತಾರೆ. ಅದೇ ರೀತಿಯಲ್ಲಿ ಮುಖ್ಯಮಂತ್ರಿ ಸಚಿವ ಸಂಪುಟ ರಚನೆ ಮಾಡುತ್ತಾರೆ'' ಎಂದರು.
ಈ ವೇಳೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿದ ಅವರು, ''ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಸೇರುತ್ತದೆಯೋ ತಿಳಿದಿಲ್ಲ. ಆದರೆ ನಾವು ಮಾತ್ರ ನಮ್ಮ ವಿಚಾರ, ಸಿದ್ದಾಂತ ಒಪ್ಪಿ ಬಂದವರನ್ನು ಸ್ವಾಗತಿಸಿದ್ದೇವೆ'' ಎಂದು ಹೇಳಿದರು.
''ಈವರೆಗೆ ಜೆಡಿಎಸ್ ವಿಲೀನದ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಸಿಎಂ ಹೇಳಿದ್ದಾರೆ. ನಮ್ಮಲ್ಲಿ ಮಾತನಾಡುವಂತೆ ಜೆಡಿಎಸ್ನಲ್ಲೂ ಕೆಲವರು ಮಾತನಾಡುತ್ತಾರೆ. ಅದಕ್ಕೆಲ್ಲ ನಾವು ಹೆಚ್ಚು ಮಹತ್ವ ನೀಡುವುದು ಬೇಡ'' ಎಂದರು.
ಇನ್ನು ಬೇರೆ ಪಕ್ಷಕ್ಕೆ ರಾಜೀನಾಮೆ ನೀಡಿ ತಮ್ಮ ಪಕ್ಷಕ್ಕೆ ಬಂದವರಿಗೆ ಅಧಿಕ ಆದ್ಯತೆ ನೀಡಲಾಗುತ್ತದೆ ಎಂಬ ಬಗ್ಗೆ ಮಾತನಾಡಿದ ಅವರು, ''ನಮ್ಮ ಪಕ್ಷ ಅಧಿಕಾರಕ್ಕೆ ಬರಲು ಕೆಲವರು ಬೇರೆ ಪಕ್ಷದಿಂದ ನಮ್ಮ ಪಕ್ಷಕ್ಕೆ ಸೇರಿದ್ದಾರೆ. ಆದರೆ ಅದು ತಿಪ್ಪಾರೆಡ್ಡಿ ಸೇರಿ ನಮ್ಮ ಪಕ್ಷದ ಹಲವರಿಗೆ ಸಮಸ್ಯೆ ಉಂಟು ಮಾಡಿದೆ'' ಎಂದು ಅಭಿಪ್ರಾಯಪಟ್ಟರು.
''ನಮಗೆ ಸಂಕ್ರಾಂತಿ, ಯುಗಾದಿ, ದೀಪಾವಳಿ ಪ್ರತಿವರ್ಷ ಬರುತ್ತದೆ. ಅದರಂತೆ ಪ್ರತಿದಿನವೂ ಮಾತನಾಡುವ ಚಾಳಿಯಿರುವ ಯತ್ನಾಳ್ ಮಾತನಾಡುತ್ತಲೇ ಇರುತ್ತಾರೆ. ಹಾಗಾಗಿ ಅವರಿಗೆ ಉತ್ತರ ನೀಡುವ ಯಾವುದೇ ಅವಶ್ಯಕತೆಯಿಲ್ಲ. ಯತ್ನಾಳ್ ಎಲ್ಲಾ ಮಾಡುತ್ತಿದ್ದರೆ ಏಕೋಪಧ್ಯಾಯ ಶಾಲೆ ಮುಖ್ಯೋಪಾದ್ಯಾಯ ಆಗುತ್ತಿದ್ದರು'' ಎಂದು ಲೇವಡಿ ಮಾಡಿದರು.