ಲಕ್ನೋ, ಜ. 02 (DaijiworldNews/MB) : ದೇಶದಲ್ಲಿ ಕೊರೊನಾ ಲಸಿಕೆ ಡ್ರೈ ರನ್ ಚಾಲ್ತಿಯಲ್ಲಿದೆ. ಈ ನಡುವೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ''ಇದು 'ಬಿಜೆಪಿ ಲಸಿಕೆ', ನಾನು ತೆಗೆದುಕೊಳ್ಳಲ್ಲ'' ಎಂದು ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಬಿಜೆಪಿಯು ಲಸಿಕೆ ಎಂದು ಹೇಳಿಕೊಂಡು ಬಳಸಲಾಗುವ ಲಸಿಕೆಯನ್ನು ನಾನು ನಂಬುವುದಾದರೂ ಹೇಗೆ? ನಾನು ಬಿಜೆಪಿಯ ಲಸಿಕೆಗಳನ್ನು ತೆಗೆದುಕೊಳ್ಳಲ್ಲ'' ಎಂದು ಹೇಳಿದ್ದಾರೆ.
''2022 ರ ಚುನಾವಣೆಯ ಬಳಿಕ ಉತ್ತರ ಪ್ರದೇಶ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು ಆ ಸಂದರ್ಭದಲ್ಲಿ ಎಲ್ಲರಿಗೂ ಲಸಿಕೆ ದೊರೆಯಲಿದೆ'' ಎಂದು ಕೂಡಾ ಹೇಳಿದ್ದಾರೆ.
ಇನ್ನು ಅಖಿಲೇಶ್ ಯಾದವ್ ಹೇಳಿಕೆಗೆ ಬಿಜೆಪಿಯು ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ''ಈ ಹೇಳಿಕೆಯ ಮೂಲಕ ಅಖಿಲೇಶ್ ದೇಶದ ವೈದ್ಯರು ಮತ್ತು ವಿಜ್ಞಾನಿಗಳಿಗೆ ಅವಮಾನ ಮಾಡಿದ್ದಾರೆ. ಅದಕ್ಕೆ ಅವರು ಕ್ಷಮೆ ಯಾಚಿಸಬೇಕು'' ಎಂದು ಆಗ್ರಹಿಸಿದ್ದಾರೆ.
''ಅಖಿಲೇಶ್ ಅವರಿಗೆ ಲಸಿಕೆ ಮೇಲೆ ನಂಬಿಕೆಯಿಲ್ಲ. ಹಾಗೆಯೇ ಉತ್ತರ ಪ್ರದೇಶದ ಜನತೆಗೆ ಅಖಿಲೇಶ್ ಯಾದವ್ ಮೇಲೆ ನಂಬಿಕೆಯಿಲ್ಲ'' ಎಂದು ಟೀಕಿಸಿದ್ದಾರೆ.