ನವದೆಹಲಿ,ಜ.02 (DaijiworldNews/HR): ಅಮೇರಿಕಾದ ಕಂಪನಿಯೊಂದು ವಿಶ್ವದ ನಾಯಕರ ಜನಪ್ರಿಯತೆಗೆ ಸಂಬಂಧಿಸಿದಂತೆ ನಡೆಸಿದ ಸಮೀಕ್ಷೆಯಲ್ಲಿ ಜಾಗತಿಕ ಮಟ್ಟದ ಇತರೆ ನಾಯಕರಿಗಿಂತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉತ್ತಮ ರೇಟಿಂಗ್ ಬಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನಡ್ಡಾ, "ಬೇರೆ ದೇಶಗಳಿಗೆ ಹೋಲಿಸಿದರೆ ಕೊರೊನಾ ಬಿಕ್ಕಟ್ಟನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿರುವುದು ಸೇರಿದಂತೆ ಹಲವು ವಿಷಯಗಳಲ್ಲಿ ಅವರು ವಿಶ್ವದ ಜನಪ್ರಿಯ ನಾಯಕರಾಗಿ ಹೊರ ಹೊಮ್ಮಿದ್ದಾರೆ" ಎಂದರು.
"ಮೋದಿ ಅವರು ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಜನಪ್ರಿಯ ನಾಯಕರಾಗಿದ್ದಾರೆ, ಅವರಲ್ಲಿರುವ ಸಮರ್ಪಣಾ ಮನೋಭಾವದಿಂದಾಗಿಯೇ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಅಮೇರಿಕಾದ ಕಂಪನಿ ಮಾರ್ನಿಂಗ್ ಕನ್ಸಲ್ಟ್, ವಿಶ್ವದ ನಾಯಕರ ಕುರಿತು ನಿರಂತರವಾಗಿ ಸಮೀಕ್ಷೆ ನಡೆಸುತ್ತಿದ್ದು, ಈ ಬಾರಿಯ ಸಮೀಕ್ಷೆಯಲ್ಲಿ ಶೇ 75ರಷ್ಟು ಮಂದಿ ಮೋದಿ ಅವರ ಕಾರ್ಯನಿರ್ವಹಣೆ ಮತ್ತು ನಾಯಕತ್ವದ ಬಗ್ಗೆ ಒಲವು ತೋರಿದ್ದು, ಶೇ 25ರಷ್ಟು ಮಂದಿ ಅವರ ನಾಯಕತ್ವವನ್ನು ಇಷ್ಟಪಟ್ಟಿಲ್ಲ. ಇದು ವಿಶ್ವದ ಬೇರೆ ಬೇರೆ ದೇಶದ ನಾಯಕರಿಗೆ ದೊರೆತಿರುವ ರೇಟಿಂಗ್ಗಿಂತ ಹೆಚ್ಚಿದೆ ಎಂದು ಸಮೀಕ್ಷೆ ತಿಳಿಸಿದೆ.