ಬೆಂಗಳೂರು, ಜ.02 (DaijiworldNews/PY): "ರೈತರ ಆದಾಯ ದ್ವಿಗುಣಗೊಳಿಸುವ ಸಲುವಾಗಿ ರಾಜ್ಯ ಸರ್ಕಾರ ಪೂರವಾಕದಂತ ಕ್ರಮ ಕೈಗೊಳ್ಳುತ್ತಿದೆ" ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯವು ಹಮ್ಮಿಕೊಂಡಿರುವ ತೋಟಗಾರಿಕಾ ಮೇಳವನ್ನು ಆನ್ ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, "ರೈತರ ಆದಾಯ ದ್ವಿಗುಣಗೊಳಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದ್ದು, ಅವರ ಆಶಯವನ್ನು ಸಫಲಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪೂರಕವಾದಂತ ಕ್ರಮ ತೆಗೆದುಕೊಳ್ಳುತ್ತಿದೆ" ಎಂದು ಹೇಳಿದರು.
"ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ ಸೇರಿದಂತೆ ಸಂಸ್ಕರಣೆ ಹಾಗೂ ಪ್ಯಾಕೇಜಿಂಗ್ಗಳ ವಿಚಾರದ ಬಗ್ಗೆ ಸಿಎಫ್ಟಿಆರ್ಐ ಹಾಗೂ ಭಾರತೀಯ ತೋಟಗಾರಿಕಾ ಸಂಸ್ಥೆಯ ಸಹಭಾಗಿತ್ವದೊಂದಿಗೆ ನೂತ ತಂತ್ರಜ್ಞಾನಗಳನ್ನು ಪರಿಚಯಿಸಲು ತೀರ್ಮಾನಿಸಲಾಗಿದೆ" ಎಂದು ತಿಳಿಸಿದರು.
"ಇತ್ತೀಚೆಗೆ ಪ್ರಧಾನಿ ಮೋದಿ ಅವರು 100ನೇ ಕಿಸಾನ್ ರೈಲಿಗೆ ಚಾಲನೆ ನೀಡಿದ್ದಾರೆ. ಕಿಸಾನ್ ರೈಲುಗಳ ಮುಖೇನ ಮೂರು ತಿಂಗಳ ಅವಧಿಯಲ್ಲಿ ಸುಮಾರು 27 ಸಾವಿರ ಟನ್ ಕೃಷಿ ಉತ್ಪನ್ನಗಳನ್ನು ಸಾಗಿಸಲಾಗಿದೆ. ಕರ್ನಾಟಕ ರಾಜ್ಯವು ತೋಟಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಮತ್ತಷ್ಟು ಹೆಚ್ಚಿನ ಸಾಧನೆ ಮಾಡಲು ಅವಶ್ಯಕವಾದ ಸಂಶೋಧನೆ, ವಿಸ್ತರಣೆ ಹಾಗೂ ಇತರ ಅಗತ್ಯವಾದ ಸೌಕರ್ಯಗಳನ್ನು ನೀಡಲು ಸರ್ಕಾರ ಬದ್ದ" ಎಂದರು.