ಬೆಂಗಳೂರು, ಜ.02 (DaijiworldNews/PY): ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಭೇಟಿ ಮಾಡಿದ್ದು, ಸಚಿವ ಸಂಪುಟ ವಿಸ್ತರಣೆಗೆ ತ್ವರಿತವಾಗಿ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ನಡೆಯಲಿರುವ ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿಗಳ ಸಭೆ ಹಾಗೂ ಕೋರ್ ಕಮಿಟಿಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಅರುಣ್ ಸಿಂಗ್ ಅವರನ್ನು ಸಿಎಂ ಬಿಎಸ್ವೈ ಅವರು ಕುಮಾರಕೃಪಾ ಅತಿಥಿ ಗೃಹದಲ್ಲಿ ಭೇಟಿ ಮಾಡಿದರು. ಬಳಿಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿದರು.
"ಗ್ರಾ.ಪಂ ಚುನಾವಣೆ ಮುಕ್ತಾಯವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಬೆಮಬಲಿತರು ಜಯಗಳಿಸಿದ್ದಾರೆ. ಅಲ್ಲದೇ, ಸಂಪುಟ ವಿಸ್ತರಣೆಗೂ ಕೂಡಾ ಒತ್ತಡ ಹೆಚ್ಚುತ್ತಿದೆ. ಈ ಹಿನ್ನೆಲೆ ಸಂಪುಟ ವಿಸ್ತರಣೆ ಇನ್ನೂ ಕೂಡಾ ತಡ ಮಾಡುವುದು ಸೂಕ್ತವಲ್ಲ. ಇದಕ್ಕೆ ಕೂಡಲೇ ಹೈಕಮಾಂಡ್ನಿಂದ ಅನುಮತಿ ದೊರಕಿಸಿಕೊಡಿ" ಎಂದು ಸಿಎಂ ಬಿಎಸ್ವೈ ಅವರು ಮನವಿ ಮಾಡಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಈ ಬಗ್ಗೆ ಚರ್ಚೆ ಮಾಡಿ ಅನುಮತಿ ಕೊಡಿಸುವುದಾಗಿ ಅರುಣ್ ಸಿಂಗ್ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.