ಮಂಗಳೂರು, ಜ.02 (DaijiworldNews/PY): "ಶಾಲೆ ಆರಂಭದ ಬಗ್ಗೆ ಸರ್ಕಾರಕ್ಕೆ ಇನ್ನೂ ಗೊಂದಲ. ಸರ್ಕಾರ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ" ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದವರು, "ಶಾಲೆ ಆರಂಭದ ಬಗ್ಗೆ ಸರ್ಕಾರಕ್ಕೆ ಇನ್ನೂ ಗೊಂದಲವಿದೆ. ಆಫ್ ಲೈನ್ ಪಾಠ ಮಾಡುವಾಗ ಆನ್ ಲೈನ್ ಯಾಕೆ?. ಆಫ್ ಲೈನ್ ಪಾಠ ಮಾಡುವವರಿಗೆ ಆನ್ ಲೈನ್ ಪಾಠ ಮಾಡಲು ಸಾಧ್ಯವೇ?" ಎಂದು ಕೇಳಿದರು.
"ಇನ್ನೂ ಕೂಡಾ ಸಿಲೆಬಸ್, ಅಂತಿಮ ಪರೀಕ್ಷೆಯ ಬಗ್ಗೆ ಸರ್ಕಾರ ಸ್ಪಷ್ಟಪಡಿಸಿಲ್ಲ. ಸರ್ಕಾರ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ. ಅಲ್ಲದೇ, ಪೋಷಕರನ್ನು ಅನಗತ್ಯ ಮಾನಸಿಕ ಒತ್ತಡಕ್ಕೆ ಒಳಗಾಗಿಸಿದೆ" ಎಂದು ಆರೋಪಿಸಿದರು.
ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಗ್ರಾ.ಪಂ ಚುನಾವಣೆ ವಿಚಾರವಾಗಿ ಮಾತನಾಡಿದ್ದು, "ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭ ಬಿಜೆಪಿಯಿಂದ ಕಿರುಕುಳ ಎದುರಿಸಿದ್ದೇವೆ. ರಾತ್ರೋ ರಾತ್ರಿ ಅಭ್ಯರ್ಥಿಗಳಿಗೆ ಆಮಿಷ, ಬೆದರಿಸುವ ಕೆಲಸ ನಡೆದಿದೆ. ಆದರೂ 49 ಪಂಚಾಯತ್ಗಳನ್ನು ಗೆದ್ದಿದ್ದೇವೆ" ಎಂದರು.
"ಕೆಲವು ತಾಲೂಕುಗಳಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಏಳು ಜನ ಶಾಸಕರಿದ್ದರೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕರೆದೊಯ್ದಿದ್ದಾರೆ. ಅವರಲ್ಲಿ ಅಭ್ಯರ್ಥಿಗಳ ಕೊರತೆ ಇದೆಯೇ?" ಎಂದು ಪ್ರಶ್ನಿಸಿದರು.