ನವದೆಹಲಿ, ಜ.02 (DaijiworldNews/PY): "ದೇಶಭಕ್ತಿ ಎಂಬುದು ಹಿಂದೂಗಳ ಮೂಲ ಗುಣವಾಗಿದೆ" ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಜೆ.ಕೆ.ಬಜಾಜ್ ಹಾಗೂ ಎಂ.ಡಿ.ಶ್ರೀನಿವಾಸ್ ಅವರು ಬರೆದಿರುವ, ‘ಮೇಕಿಂಗ್ ಎ ಹಿಂದೂ ಪೇಟ್ರಿಯೆಟ್: ಬ್ಯಾಕ್ಗ್ರೌಂಡ್ ಆಫ್ ಗಾಂಧೀಜಿಸ್ ಹಿಂದ್ ಸ್ವರಾಜ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, "ಹಿಂದೂಗಳ ಮೂಲ ಗುಣ ದೇಶಭಕ್ತಿ. ಹಿಂದೂ ಯಾವತ್ತಿಗೂ ಭಾರತದ ವಿರೋಧಿಯಾಗಲು ಸಾಧ್ಯವಿಲ್ಲ. ಒಬ್ಬ ತನ್ನ ದೇಶವನ್ನು ಪ್ರೀತಿಸುತ್ತಾನೆ ಎಂದರೆ ಆತ ಕೇವಲ ಭೂಮಿಯನ್ನು ಮಾತ್ರ ಅಲ್ಲ. ಜನ, ನದಿ ಸೇರಿದಂತೆ ಸಂಸ್ಕೃತಿ ಸಂಪ್ರದಾಯ ಎಲ್ಲವನ್ನೂ ಕೂಡಾ ಪ್ರೀತಿಸುತ್ತಾನೆ ಎಂದು ಅರ್ಥ" ಎಂದು ಹೇಳಿದ್ದಾರೆ.
ಗಾಂಧಿ ಅವರನ್ನು ಸಂಘವು ತನ್ನವರೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎನ್ನುವ ವದಂತಿಗಳಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಮಾತು ಸತ್ಯವಲ್ಲ. ಯಾರೂ ಕೂಡಾ ಅಂತಹ ಮಹಾನ್ ಚೇತನಗಳನ್ನು ತಮ್ಮವರೆಂದು ಸೀಮಿತಗೊಳಿಸಲು ಆಗುವುದಿಲ್ಲ" ಎಂದು ತಿಳಿಸಿದ್ದಾರೆ.
ಗಾಂಧಿ ಅವರ ಬಗೆಗಿನ ಸಂಶೋಧನಾ ದಾಖಲೆ ಪುಸ್ತಕದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ನನ್ನ ಪಾಲಿಗೆ ಧರ್ಮ ಹಾಗೂ ದೇಶಪ್ರೇಮ ಬೇರೆಬೇರೆಯಲ್ಲ. ತಾಯ್ನಾಡಿನ ಮೇಲಿನ ಪ್ರೀತಿ ಆಧ್ಯಾತ್ಮದಿಂದ ಧರ್ಮ ಹಾಗೂ ದೇಶಪ್ರೇಮ ಹುಟ್ಟಿಕೊಂಡಿದೆ ಎಂದು ಗಾಂಧಿ ಹೇಳುತ್ತಿದ್ದರು" ಎಂದು ಹೇಳಿದ್ದಾರೆ.