ಚಂಡೀಗಢ, ಜ.02 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಗುಂಪು ಪಂಜಾಬ್ನ ಹೊಶಿಯಾರ್ಪುರದಲ್ಲಿರುವ ಬಿಜೆಪಿ ಮುಖಂಡನ ಮನೆ ಮುಂದೆ ಸೆಗಣಿ ತಂದು ಸುರಿದಿದೆ ಎಂದು ಆಪಾದಿಸಲಾಗಿದೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅಮರೀಂದರ್ ಸಿಂಗ್, "ಪ್ರತಿಭಟನೆ ಹೆಸರಿನಲ್ಲಿ ಜನರಿಗೆ ಕಿರುಕುಳ ನೀಡಲು ಅವಕಾಶವಿಲ್ಲ" ಎಂದು ಹೇಳಿದ್ದಾರೆ.
ಕೃಷಿ ಮಸೂದೆ ವಿರೋಧಿಸಿ ಬಿಜೆಪಿ ಮುಖಂಡ ಹಾಗೂ ಪಂಜಾಬ್ನ ಮಾಜಿ ಸಚಿವ ಟಿಕ್ಶಾನ್ ಸೂದ್ ಮನೆಯ ಮುಂದೆ ರೈತರು ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನೂ ಕೂಗಿದ್ದಾರೆ. ಪ್ರತಿಭಟನಾನಿರತರ ಪೈಕಿ ಕೆಲವರು ಸೆಗಣಿ ತಂದು ಸೂದ್ ಮನೆ ಮುಂದೆ ಸುರಿದರು ಎನ್ನಲಾಗಿದೆ.
ಇನ್ನು ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ, ಪ್ರತಿಭಟನಾಕಾರರು ಮತ್ತು ಬಿಜೆಪಿ ಮುಖಂಡನ ಬೆಂಬಲಿಗರ ನಡುವಿನ ಘರ್ಷಣೆ ತಡೆದರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.