ಶಿವಮೊಗ್ಗ, ಜ.02 (DaijiworldNews/PY): "ಜ.2 ಹಾಗೂ 3ರಂದು ನಡೆಯಲಿರುವ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮುಖ್ಯವಾದ ವಿಚಾರಗಳ ಬಗ್ಗೆ ಮಾತ್ರವೇ ಚರ್ಚಿಸಲಾಗುತ್ತದೆ" ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "25 ವರ್ಷಗಳ ನಂತರ ಶಿವಮೊಗ್ಗದಲ್ಲಿ ಈ ರೀತಿಯಾದ ಮಹತ್ವದ ಸಭೆ ನಡೆಯುತ್ತಿದೆ. ಈ ಹಿಂದೆ ಬೆಳಗಾವಿಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಲವ್ ಜಿಹಾದ್ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಚರ್ಚೆ ನಡೆದಿತ್ತು. ಜ.2 ಹಾಗೂ 3ರಂದು ನಡೆಯಲಿರುವ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ರೀತಿಯಾದ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ" ಎಂದಿದ್ದಾರೆ.
ನಗರದ ಪಿಇಎಸ್ ಶಿಕ್ಷ ಸಂಸ್ಥೆಯ ಪ್ರೇರಣಾ ಸಭಾಂಗಣದಲ್ಲಿ ಎರಡು ದಿನಗಳ ಕಾಲ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಈ ಸಭೆಗೆ ರಾಜ್ಯದಿಂದ ಸುಮಾರು 195 ಮಂದಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಇವರ ಹೊರತು ಮಾಧ್ಯಮಗಳಿಗೆ ಹಾಗೂ ಯಾರಿಗೂ ಕೂಡಾ ಪ್ರವೇಶವಿಲ್ಲ. ಸಿಎಂ ಬಿಎಸ್ ಯಡಿಯೂರಪ್ಪ ಅವರು ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆಯನ್ನುಉದ್ಘಾಟಿಸಲಿದ್ದು, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ.