ನವದೆಹಲಿ, ಜ.02 (DaijiworldNews/PY): "ಕೇಂದ್ರ ಸರ್ಕಾರದೊಂದಿಗೆ ಜ.4ರಂದು ನಡೆಯಲಿರುವ ಸಭೆಯಲ್ಲಿ ನಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ ಹರಿಯಾಣದಲ್ಲಿ ಮಾಲ್ ಹಾಗೂ ಪೆಟ್ರೋಲ್ ಬಂಕ್ಗಳನ್ನು ಬಂದ್ ಮಾಡುವ ದಿನಾಂಕವನ್ನು ಘೋಷಿಸುತ್ತೇವೆ" ಎಂದು ರೈತ ಸಂಘಟನೆ ಎಚ್ಚರಿಕೆ ನೀಡಿದೆ.
ಸಿಂಗು ಗಡಿ ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ರೈತ ಮುಖಂಡರು, "ಬುಧವಾರ ನಡೆದ ಮಾತುಕತೆಯ ಸಂದರ್ಭ ವಿದ್ಯುತ್ ಮಸೂದೆ ಹಾಗೂ ಕೃಷಿ ತ್ಯಾಜ್ಯ ದಹನ ವಿಚಾರದಲ್ಲಿ ಸಹಮತ ಮೂಡಿದ್ದರೂ ಕೂಡಾ ಪ್ರಮುಖವಾದ ಬೇಡಿಕೆಗಳು ಬಾಕಿಯಾಗಿವೆ. ಕಾಯ್ದೆಗಳನ್ನು ರದ್ದುಪಡಿಸುವ ವಿಚಾರದಲ್ಲಿ ಸರ್ಕಾರ ಸೂಕ್ತವಾಗಿ ಪ್ರತಿಕ್ರಿಯಿಸದಿದ್ದಲ್ಲಿ ಹರಿಯಾಣದ ಎಲ್ಲಾ ಮಾಲ್ ಹಾಗೂ ಪೆಟ್ರೋಲ್ ಬಂಕ್ಗಳನ್ನು ಬಂದ್ ಮಾಡಲಾಗುವುದು" ಎಂದಿದ್ದಾರೆ.
ಸ್ವರಾಜ್ ಭಾರತದ ಮುಖಂಡ ಯೋಗೇಂದ್ರ ಯಾದವ್ ಮಾತನಾಡಿ, "ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಹರಿಯಾಣ-ರಾಜಸ್ಥಾನ ಗಡಿಯ ಶಹಜಹಾನ್ಪುರದಲ್ಲಿ ಧರಣಿ ಕುಳಿತಿರುವ ರೈತರ ಗುಂಪು ದೆಹಲಿಯತ್ತ ಧಾವಿಸಲಿದೆ" ಎಂದು ಹೇಳಿದ್ದಾರೆ.
"ಮುಂದಿನ ಹಂತದ ಮಾತುಕತೆಯ ಸಂದರ್ಭ ದೃಢವಾದ ತೀರ್ಮಾನ ಕೈಗೊಳ್ಳದಿದ್ದರೆ, ಜ.6ರಂದು ಟ್ರಾಕ್ಟರ್ ರ್ಯಾಲಿ ಹಮ್ಮಿಕೊಳ್ಳಲಾಗುವುದು" ಎಂದು ರೈತ ಮುಖಂಡ ಯದುವೀರ್ ಸಿಂಗ್ ತಿಳಿಸಿದ್ದಾರೆ.