ಕೋಲ್ಕತ್ತಾ, ಜ.02 (DaijiworldNews/PY): 8ನೇ ಲ್ಯಾಂಡಿಂಗ್ ಕ್ರಾಫ್ಟ್ ಯುಟಿಲಿಟಿ ನೌಕೆಯು ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದ್ದು, ದೇಶದ ರಕ್ಷಣಾ ಸನ್ನದ್ಧತೆಗೆ ಈ ನೌಕೆಯು ಇನ್ನಷ್ಟು ಬಲ ನೀಡಲಿದೆ ಎನ್ನಲಾಗಿದೆ.
"ಪಿಎಸ್ಯು, ಜಿಆರ್ಎಸ್ಇ, ಎಂಟನೇ ಲ್ಯಾಂಡಿಂಗ್ ಕ್ರಾಫ್ಟ್ ಯುಟಿಲಿಟಿ ನೌಕೆಯನ್ನು ಭಾರತೀಯ ನೌಕಾಪಡೆಗೆ ಜ.1ರ ಶುಕ್ರವಾರದಂದು ಹಸ್ತಾಂತರಿಸಿದೆ. ಎಂಟನೇ ಲ್ಯಾಂಡಿಂಗ್ ಕ್ರಾಫ್ಟ್ ಯುಟಿಲಿಟಿ ನೌಕೆಯನ್ನು ದಕ್ಷಿಣ ಚೀನಾ ಸಮುದ್ರಕ್ಕೆ ಸಾಗುವ ಮಾರ್ಗಕ್ಕೆ ಸಮೀಪವಿರುವ ಅಂಡಮಾನ್-ನಿಕೋಬಾರ್ ದ್ವೀಪದ ಸಮೀಪ ನಿಯೋಜನೆ ಮಾಡಲಾಗಿದೆ" ಎಂಬುದಾಗಿ ಅಧಿಕಾರಿಯೋರ್ವರು ಹೇಳಿದ್ದಾರೆ.
"ಈ ಹಡಗನ್ನು ಕರಾವಳಿ ತೀರಕ್ಕೂ ಕೂಡಾ ಲ್ಯಾಂಡಿಂಗ್ ಕಾರ್ಯಾಚರಣೆ ಮಾಡುವಂತೆ ವಿನ್ಯಾಸ ಮಾಡಲಾಗಿದೆ. ಕೊರೊನಾ ಹಾಗೂ ಲಾಕ್ಡೌನ್ ನಡುವೆಯೂ ಕೂಡಾ ಈ ಹಡಗನ್ನು ಕೋಲ್ಕತ್ತ ಮೂಲದ ಜಿಆರ್ಎಸ್ಇ ನಿರ್ಮಾಣ ಮಾಡಿ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿದೆ" ಎಂದು ಜಿಆರ್ಎಸ್ಇ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ನಿವೃತ್ತ ರಿಯರ್ ಅಡ್ಮಿರಲ್ ವಿ.ಕೆ.ಸಕ್ಸೇನಾ ತಿಳಿಸಿದ್ದಾರೆ.
8ನೇ ಲ್ಯಾಂಡಿಂಗ್ ಕ್ರಾಫ್ಟ್ ಯುಟಿಲಿಟಿ ನೌಕೆಯು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ಶೇ.90ರಷ್ಟು ಭಾಗಗಳು ಭಾರತದಲ್ಲೇ ತಯಾರಾಗಿವೆ. ಈ ನೌಕೆಯಲ್ಲಿ ಸುಮಾರು 216 ಮಂದಿ ಇರುವಷ್ಟು ಸ್ಥಳಾವಕಾಶವಿದ್ದು, ಲ್ಯಾಂಡಿಂಗ್ ಕಾರ್ಯಾಚರಣೆಯ ಸಂದರ್ಭ ರಕ್ಷಣೆಯ ಸಲುವಾಗಿ ಎರಡು ಸ್ವದೇಶಿ ನಿರ್ಮಿತವಾದ ಸಿಆರ್ಎನ್ 91 ಗನ್ಗಳನ್ನು ಈ ನೌಕೆ ಹೊಂದಿದೆ.