ಬೆಂಗಳೂರು, ಜ. 01 (DaijiworldNews/SM): ರಾಜ್ಯದ ಜನವರಿ 1ರಿಂದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ತರಗತಿಗಳು ಆರಂಭಗೊಂಡಿವೆ. ಸೋಂಕು ನಿಯಂತ್ರಣ ಕ್ರಮಗಳೊಂದಿಗೆ ತರಗತಿಗಳನ್ನು ಪ್ರಾರಂಭಿಸಲಾಗಿದ್ದು, ನಿಯಂತ್ರಣ ಕ್ರಮಗಳ ಪರಿಶೀಲನೆಗೆ ವಿಚಕ್ಷಣ ದಳವನ್ನು ರಚಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ರಾಜ್ಯದ ಯಾವುದೇ ಶಾಲೆಗಳಿಗೆ ಯಾವಾಗಬೇಕಾದರೂ ವಿಚಕ್ಷಣ ದಳ ಹಠಾತ್ ಭೇಟಿ ನೀಡಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದರು. ಇನ್ನು ಇಂದು ಮೊದಲ ದಿನ ಸಚಿವ ಸುರೇಶ್ ಕುಮಾರ್ ಅವರು ಇಂದು ಹಲವು ಶಾಲೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿ ಸಮುದಾಯದಲ್ಲಿ ಆತ್ಮಸ್ಥೈರ್ಯ ತುಂಬಿದರು.
ಬಳಿಕ ಮಾತನಾಡಿದ ಅವರು, ಇಂದಿನಿಂದ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗುತ್ತಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳು ಶಾಲೆಗಳತ್ತ ಸಂಭ್ರಮದಿಂದ ಹೆಜ್ಜೆ ಇಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.