ನವದೆಹಲಿ, ಜ.01 (DaijiworldNews/PY): ಲೈಟ್ ಹೌಸ್ ಯೋಜನೆಗೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು.
ವಿಡಿಯೋ ಕಾನ್ಫರೆನ್ಸ್ ಮುಖೇನ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ವಸತಿ ಸೌಲಭ್ಯಗಳನ್ನು ನೀಡುವುದು ಸರ್ಕಾರ ಆದ್ಯತೆ ಆಗಿದೆ" ಎಂದರು.
ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್-ಇಂಡಿಯಾ ಅಡಿ ಆರು ರಾಜ್ಯಗಳಾದ ಇಂದೋರ್, ರಾಜ್ಕೋಟ್, ಚೆನ್ನೈ, ರಾಂಚಿ, ಅಗರ್ತಲಾ ಹಾಗೂ ಲಕ್ನೋದಲ್ಲಿ ಎಲ್ಎಚ್ಪಿ ಯೋಜನೆಯಡಿ ಈ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರತಿಯೊಂದು ನಗರದಲ್ಲಿ ಒಂದು ಸಾವಿರ ಮನೆಗಳಂತೆ 12 ತಿಂಗಳೊಳಗೆ ದೇಶದ ಆರು ರಾಜ್ಯಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ.
ಈ ಯೋಜನೆಯ ಬಗ್ಗೆ ಮಾತನಾಡಿದ ಪ್ರಧಾನಿ, "ಜಿಎಚ್ಟಿಸಿ ಹಾಗೂ ಆಧುನಿಕ ತಂತ್ರಜ್ಞಾನ ಹಾಗೂ ಹೊಸ ಪ್ರಕ್ರಿಯೆಗಳಿಂದಾಗಿ ಈ ಯೋಜನೆಯಡಿಯಲ್ಲಿ ಕಡಿಮೆ ಸಮಯದಲ್ಲಿ, ಕೈಗೆಟಕುವ ದರದಲ್ಲಿ ಉನ್ನತ ತಂತ್ರಜ್ಞಾನಗಳ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ" ಎಂದು ತಿಳಿಸಿದರು.
ಈ ತಂತ್ರಜ್ಞಾನಗಳನ್ನು ಬಳಕೆ ಮಾಡಿರುವ ಸ್ಥಳಗಳಿಗೆ ವಾಸ್ತುಶಿಲ್ಪಿಗಳು, ವಿದ್ಯಾರ್ಥಿಗಳು ಭೇಟಿ ನೀಡಿ ಅಧ್ಯಯನ ಮಾಡುವಂತೆ ಹೇಳಿದರು.