ಬೆಂಗಳೂರು, ಜ.01 (DaijiworldNews/PY):"ಇನ್ನೂ ಎರಡು ವರ್ಷ ನಾನೇ ಸಿಎಂ ಎಂದು ಯಡಿಯೂರಪ್ಪ ಅವರೇ ಸೆಲ್ಫ್ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ. ಸಿಎಂ ಬಿಎಸ್ವೈ ಅವರನ್ನು ಅಧಿಕಾರದಿಂದ ಯಾವಾಗ ಇಳಿಯುತ್ತೀರಿ ಎಂದು ನಾವು ಕೇಳಲಿಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಹೊಸ ವರ್ಷದ ಪ್ರಯುಕ್ತ ನಾಡಿನ ಜನತೆಗೆ ಶುಭಾಶಯ ತಿಳಿಸಿ ಸದಾಶಿವನಗರದಲ್ಲಿ ಮಾತನಾಡಿದ ಅವರು, "ಕಳೆದ ವರ್ಷ ನೆಮ್ಮದಿ ಹಾಗೂ ಆರೋಗ್ಯಕ್ಕೆ ಸಂಕಟವಾಗಿತ್ತು. ಅದೆಲ್ಲಾ ನಿವಾರಣೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದರು.
"ನಾನು ಶಾಲೆ ಮುಚ್ಚಬೇಕು ಎಂದು ಹೇಳುತ್ತಿಲ್ಲ. ಆದರೆ, ಶಾಲೆಗೆ ಬಹಳ ದಿನಗಳ ಬ್ರೇಕ್ ಹಾಕಬಾರದು. ಹೀಗೆ ಮಾಡಿದ್ದಲ್ಲಿ ಮಕ್ಕಳ ವರ್ತನೆಯಲ್ಲಿ ಬದಲಾವಣೆಯಾಗುತ್ತದೆ. ಅಲ್ಲದೇ ಗುಣಮಟ್ಟದ ಶಿಕ್ಷಣದ ಮೇಲೆ ತೊಂದರೆಯಗುತ್ತದೆ" ಎಂದು ಹೇಳಿದರು.
ಶಾಲಾರಂಭದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿ ಶಾಲಾ-ಕಾಲೇಜು ತೆರೆಯಲಿ. ಇಲ್ಲದಿದ್ದಲ್ಲಿ ವಿದ್ಯಾರ್ಥಿಗಳ ಪ್ರಗತಿ ಮೇಲೆ ಸಮಸ್ಯೆಯಾಗುತ್ತದೆ" ಎಂದರು.
"ರೂಪಾಂತರಿ ಕೊರೊನಾ ವಿಚಾರದ ಬಗ್ಗೆ ಸರ್ಕಾರಕ್ಕೆ ಸಾಮಾನ್ಯ ಜ್ಞಾನವಿರಬೇಕಿತ್ತು. ಅಲ್ಲಿಂದ ಬಂದ ಜನರನ್ನು ವಿಮಾನ ನಿಲ್ದಾಣದಲ್ಲಿಯೇ ಆರೋಗ್ಯ ತಪಾಸಣೆ ಮಾಡಿಸಬೇಕಿತ್ತು. ಸರ್ಕಾರವು ಆಡಳಿತ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ" ಎಂದು ಆರೋಪಿಸಿದರು.
ಗ್ರಾ.ಪಂ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಈ ಬಗ್ಗೆ ನನಗೆ ಸಂತೋಷವಿದೆ. ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಸೆಳೆಯು ಕಾರ್ಯ ಮಾಡುತ್ತಿದ್ದಾರೆ. ನಮ್ಮ ಅಭ್ಯರ್ಥಿಗಳು ಇವರ ಹಣದ ನಡುವೆ ಗೆದ್ದಿದ್ದಾರೆ. ಈ ವರ್ಷ ಸಂಘಟನೆಯ ಹಾಗೂ ಹೋರಾಟದ ವರ್ಷ" ಎಂದು ಹೇಳಿದರು.