ಬೆಂಗಳೂರು,ಜ.01 (DaijiworldNews/HR): ಕೊರೊನಾ ವ್ಯಾಕ್ಸಿನ್ ಅಭಿಯಾನದ ಡ್ರೈರನ್ ಜನವರಿ 2ರಿಂದ ನಡೆಯಲಿದ್ದು, ವ್ಯಾಕ್ಸಿನ್ ನೀಡುವಾಗ ಅನುಸರಿಸಬೇಕಾದ ಹಂತಗಳ ಕುರಿತು ಡ್ರೈರನ್ ನಡೆಸಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, "ವ್ಯಾಕ್ಸಿನ್ ಹಾಕುವುದನ್ನು ಬಿಟ್ಟು ಉಳಿದೆಲ್ಲ ಹಂತಗಳನ್ನು ಯಾವ ರೀತಿ ನಿಭಾಯಿಸಬೇಕು ಎಂಬುದನ್ನು ಡ್ರೈರನ್ನಲ್ಲಿ ಪಾಲಿಸಲಾಗುತ್ತದೆ. ರಾಜ್ಯದ 5 ಜಿಲ್ಲೆಗಳನ್ನು ಕೊರೊನಾ ವ್ಯಾಕ್ಸಿನ್ ಡ್ರೈರನ್ಗೆ ಆಯ್ಕೆ ಮಾಡಲಾಗಿದೆ. ಆ ಜಿಲ್ಲೆಯ ಜಿಲ್ಲಾ ಕೇಂದ್ರ, ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೈರನ್ ನಡೆಯಲಿದೆ" ಎಂದರು.
ಇನ್ನು "ಕಲಬುರಗಿ, ಬೆಂಗಳೂರು, ಬೆಳಗಾವಿ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಡ್ರೈರನ್ ನಡೆಯಲಿದ್ದು, ಲಸಿಕೆ ಬಂದ ತಕ್ಷಣ ಹೊಸ ವರ್ಷದಲ್ಲಿ ರಾಜ್ಯದ ಜನರಿಗೆ ನೀಡಲಾಗುತ್ತದೆ" ಎಂದು ತಿಳಿಸಿದ್ದಾರೆ.