ಮಂಗಳೂರು, ಜ.01 (DaijiworldNews/PY): ಕೊರೊನಾ ಹಿನ್ನೆಲೆ ಸುಮಾರು ಒಂಭತ್ತು ತಿಂಗಳ ನಂತರ ರಾಜ್ಯ ಸರ್ಕಾರ ಸೂಚನೆಯಂತೆ ಜ.1ರಂದು ಶಾಲಾರಂಭವಾಗಿದೆ.
ಮಂಗಳೂರು
ಉಡುಪಿ
ರಾಜ್ಯ ಸರ್ಕಾರದ ಸೂಚನೆಯಂತೆ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಕಾಲೇಜುಗಳು ಶುಕ್ರವಾರ ಆರಂಭವಾಗಿವೆ.
6ರಿಂದ 9 ನೇ ತರಗತಿಯವರೆಗಿನ ಮಕ್ಕಳು ಸರ್ಕಾರದ ಮಹತ್ವಾಕಾಂಕ್ಷೆಯ ವಿದ್ಯಾಗಮ ಕಾರ್ಯಕ್ರಮಕ್ಕಾಗಿ ಶಾಲೆಗಳಲ್ಲಿ ಹಾಜರಾಗಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳು ಪಾಲಕರ ಅನುಮತಿ ಪತ್ರಗಳೊಂದಿಗೆ ಬಂದಿದ್ದು, ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ತರಗತಿಗಳಿಗೆ ಹಾಜರಾಗಿದ್ದಾರೆ.
ಮುಂಬರುವ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. ಶಾಲಾರಂಭದ ದಿನದಂದು ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಬೇಕು. ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ಮಾರ್ಗದರ್ಶನ ನೀಡಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ
ಉಡುಪಿಯಲ್ಲೂ ಕೂಡಾ ರಾಜ್ಯ ಶಿಕ್ಷಣ ಇಲಾಖೆಯ ಸೂಚನೆಯಂತೆ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಕಾಲೇಜುಗಳು ಶುಕ್ರವಾರ ಆರಂಭವಾಗಿವೆ. ಜಿಲ್ಲೆಯ ಶಾಲೆಗಳಲ್ಲಿ ಹಬ್ಬದ ವಾತಾವರಣವಿದ್ದು, ಕೆಲವು ಶಾಲೆಗಳು ರಂಗೋಲಿ, ತಳಿರು ತೋರಣಗಳಿಂದ ಸಜ್ಜುಗೊಂಡಿದ್ದವು.
ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಶಾಲೆಗೆ ಆಗಮಿಸಿದ್ದಾರೆ. ವಿದ್ಯಾರ್ಥಿಗಳಿಗೆ ಕೊರೊನಾ ಮಾರ್ಗಸೂಚಿಯನ್ನು ಕೂಡಾ ಕಡ್ಡಾಯಗೊಳಿಸಲಾಗಿದೆ. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತರಗತಿ ನಡೆಯಲಿದ್ದು, 6ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ತರಗತಿಗಳು ನಡೆಯಲಿವೆ. ಒಂದು ತರಗತಿಯಲ್ಲಿ ಕೇವಲ 20 ಮಂದಿ ವಿದ್ಯಾರ್ಥಿಗಳಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಕಡ್ಡಾಯವಾಗಿ ಮಾಸ್ಕ್ ಹಾಗೂ ಕೈಗಳನ್ನು ಸ್ಯಾನಿಟೈಸರ್ನಿಂದ ಸ್ವಚ್ಛಗೊಳಿಸಲು ಸೂಚನೆ ನೀಡಲಾಗಿದೆ.