ಬೆಂಗಳೂರು,ಜ.01 (DaijiworldNews/HR): "ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೆ ಯಾವುದೇ ಭಯ ಬೇಡ. ತರಗತಿ ನಡೆಸುವುದಕ್ಕೆ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆತಂಕ ಇರುವ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದೂ ಬೇಡ. ಆನ್ಲೈನ್ನಲ್ಲಿ ಪಾಠ ಕೇಳುವ ಅವಕಾಶವೂ ಇದೆ" ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಇಂದು ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಸರ್ಕಾರಿ ಶಾಲೆಗೆ ತೆರಳಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ಬಳಿಕ ಮಾತನಾಡಿದ ಅವರು,"ಎಲ್ಲಾ ಸರ್ಕಾರಿ ಶಾಲೆಗಳು ಸುರಕ್ಷತಾ ಕೇಂದ್ರಗಳಂತಿವೆ. ಸೋಂಕು ಹರಡುವುದನ್ನು ತಪ್ಪಿಸಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಶಿಕ್ಷಣದಷ್ಟೇ ಆರೋಗ್ಯವೂ ಮುಖ್ಯ, ಹಾಗಾಗಿ ಅದನ್ನು ಗಮನದಲ್ಲಿಟ್ಟುಕೊಂಡೇ ಶಾಲೆಗಳನ್ನು ಪುನರಾರಂಭಿಸಲಾಗಿದೆ" ಎಂದರು.
ಇನ್ನು "ಚೆನ್ನಾಗಿ ಓದಿ, ಧೈರ್ಯವಾಗಿ ಓದಿ. ಯಾವುದೇ ಭಯ ಇಟ್ಟುಕೊಳ್ಳಬೇಡಿ. ಜ್ವರ, ಕೆಮ್ಮು,ನೆಗಡಿ ಬಂದರೆ ಶಾಲೆಗೆ ಬರಬೇಕೆಂದಿಲ್ಲ ಗುಣಮುಖರಾದ ನಂತರವೇ ಬನ್ನಿ" ಎಂದು ಮಕ್ಕಳಿಗೆ ಸಲಹೆ ನೀಡಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಪರಿಶೀಲಿಸಲು ಪ್ರತಿ ಜಿಲ್ಲೆಯಲ್ಲಿ ವಿಚಕ್ಷಣ ದಳ ರಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.