ನವದೆಹಲಿ, ಜ.01 (DaijiworldNews/PY): ರಾಜಸ್ಥಾನದ ಶಹಜಹಾನ್ಪುರ ಗಡಿಯಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸಿ, ಬ್ಯಾರಿಕೇಡ್ಗಳನ್ನು ಮುರಿದು ಹಾಕಿದ ಪ್ರತಿಭಟನಾಕಾರರ ಮೇಲೆ ಹರಿಯಾಣ ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿ ಪ್ರಯೋಗಿಸಿದ ಘಟನೆ ಡಿ.31ರ ಗುರುವಾರದಂದು ನಡೆದಿದೆ.
ಹಲವು ದಿನಗಳಿಂದ ಶಹಜಹಾನ್ಪುರ-ರೆವಾರಿ ಗಡಿಯಲ್ಲಿ ರೈತರ ಒಂದು ತಂಡವು ಪ್ರತಿಭಟನೆ ನಡೆಸುತ್ತಿದ್ದು, ರಸ್ತೆ ಬಂದ್ ಮಾಡಿದೆ. ರಾಜಸ್ಥಾನದ ಮೂಲಕ ಬಂದ ಇನ್ನೊಂದು ಗುಂಪು ಟ್ರಾಕ್ಟರ್ಗಳ ಮುಖೇನ ಹರಿಯಾಣಕ್ಕೆ ಪ್ರವೇಶಿಸಲು ಯತ್ನಿಸಿತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಿಸಾನ್ ಮಹಾಪಂಚಾಯತ್ ಅಧ್ಯಕ್ಷ ರಾಮಪಾಲ್ ಜಾಟ್, "ಪ್ರತಿಭಟನೆಯು ಶಾಂತಿಯುತವಾಗಿ ನಡೆಯುತ್ತಿದೆ. ಕೆಲ ರೈತರು ಒತ್ತಾಯಪೂರ್ವಕವಾಗಿ ಹರಿಯಾಣದೊಳಕ್ಕೆ ನುಗ್ಗುತ್ತಾರೆ ಎಂದು ನಾವು ಭಾವಿಸಿರಲಿಲ್ಲ" ಎಂದಿದ್ದಾರೆ.
"ಹೆಚ್ಚು ಮಂದಿ ಯುವಕರೇ ಇದ್ದ ರೈತರ ಗುಂಪು, ಬ್ಯಾರಿಕೇಡ್ಗಳನ್ನು ತಳ್ಳಿ, ದೆಹಲಿಯತ್ತ ತೆರಳಲು ಯತ್ನಿಸಿದ್ದು, ಈ ಸಂದರ್ಭ ಅವರನ್ನು ನಿಯಂತ್ರಣ ಮಾಡಲು ಜಲಫಿರಂಗಿ ಹಾಗೂ ಅಶ್ರುವಾಯು ಪ್ರಯೋಗ ಮಾಡಬೇಕಾಯಿತು" ಎಂಬುದಾಗಿ ಹರಿಯಾಣ ಪೊಲೀಸರು ತಿಳಿಸಿದ್ದಾರೆ.
"ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ ತನಕ ಹೊಸ ವರ್ಷಾಚರಣೆ ಇಲ್ಲ" ಎಂದು ಸಿಂಘ ಗಡಿಯಲ್ಲಿ ತಿಂಗಳಿನಿಂದ ಬೀಡುಬಿಟ್ಟಿರುವ ರೈತರು ಹೇಳಿದ್ದಾರೆ.
"ಹೊಸ ವರ್ಷಾಚರಣೆಯಂದು ನಮ್ಮ ಕುಟುಂಬಗಳಿಂದ ದೂರವಿದ್ದೇವೆ ಎಂದು ನಮಗೆ ಬೇಸರವಿಲ್ಲ. ಇಲ್ಲಿರುವ ಎಲ್ಲರೂ ಕೂಡಾ ನಮ್ಮ ಕುಟುಂಬದ ಸದಸ್ಯರೇ ಆಗಿದ್ದಾರೆ. ನಮ್ಮ ಸಾಮರ್ಥ್ಯವನ್ನು ಸರ್ಕಾರ ಇನ್ನಷ್ಡು ಪರೀಕ್ಷಿಸಲು ಇಚ್ಛಿಸಿದರೆ, ಸಾಮರ್ಥ್ಯ ತೋರಿಸಲು ನಾವು ಸಿದ್ದ. ನಮಗೆ ಬೇಡಿಕೆಗಳು ಈಡೇರುವುದು ಮುಖ್ಯ" ಎಂದಿದ್ದಾರೆ.