ಬೆಂಗಳೂರು, ಡಿ. 31(DaijiworldNews/SM): ರಾಜ್ಯ ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದ್ದ ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ 8 ಮಂದಿ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಷದ ಕೊನೆಯ ದಿನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ನಿರ್ಭಯಾ ಸೇಫ್ ಸಿಟಿ ಯೋಜನೆ ಟೆಂಡರ್ ಕುರಿತು ಜಟಾಪಟಿಗಿಳಿದಿದ್ದ ಐಪಿಎಸ್ ಅಧಿಕಾರಿಗಳಾದ ಡಿ.ರೂಪಾ ಹಾಗೂ ಹೇಮಂತ್ ನಿಂಬಾಳ್ಕರ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿದೆ. ಈ ನಡುವೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಡಿಜಿಪಿ ಡಾ.ಕೆ.ರಾಮಚಂದ್ರ ರಾವ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಮಂಗಳೂರಿನ ಕಮೀಷನರ್ ವಿಕಾಸ್ ಕುಮಾರ್ ವಿಕಾಸ್ ಅವರನ್ನು, ಕರ್ನಾಟಕ ಮೀಸಲು ಪೊಲೀಸ್ ನ ಡಿಐಜಿ ಆಗಿ ವರ್ಗಾವಣೆ ಮಾಡಲಾಗಿದೆ.
ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಿ.ರೂಪಾ ಅವರ ಸ್ಥಾನಕ್ಕೆ ಗ್ರೇವಿಯೆನ್ಸ್ ಅಂಡ್ ಹ್ಯೂಮನ್ ರೈಟ್ಸ್ ಎಡಿಜಿಪಿಯಾಗಿದ್ದಂತ ಮಾಲಿನಿ ಕೃಷ್ಣಮೂರ್ತಿಯವರನ್ನು ವರ್ಗಾವಣೆ ಮಾಡಲಾಗಿದೆ. ಡಿ.ರೂಪಾ ಅವರನ್ನು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆ ಮಾಡಿದೆ. ರೂಪಾ ಜೊತೆಗೆ ಐಜಿಪಿ ಹಾಗೂ ಎಸಿಪಿಯಾಗಿದ್ದ ಹೇಮಂತ್ ನಿಂಬಾಳ್ಕರ್ ಅವರನ್ನು ಐಎಸ್ ಡಿಯ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಎಸಿಬಿಯ ಐಜಿಪಿಯ ಚಂದ್ರಶೇಖರ್ ಅವರನ್ನು ಬೆಂಗಳೂರು ಕೇಂದ್ರ ವಿಭಾಗದ ಐಜಿಪಿಯಾಗಿ ನೇಮಿಸಲಾಗಿದೆ. ಮೈಸೂರು ವಿಭಾಗದ ಐಜಿಪಿ ವಿಪುಲ್ ಕುಮಾರ್ ಅವರನ್ನು ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ಐಜಿಪಿ ಮತ್ತು ಡೈರೆಕ್ಟರ್ ಆಗಿ ನೇಮಕ ಮಾಡಲಾಗಿದೆ.