ನವದೆಹಲಿ, ಡಿ. 31(DaijiworldNews/SM): ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿನ ನಗದು ಪಥಗಳು ಫೆಬ್ರವರಿ 15 ರವರೆಗೆ ಕಾರ್ಯನಿರ್ವಹಿಸಲಿವೆ ಎಂದು ಸರಕಾರ ಗುರುವಾರ ಸ್ಪಷ್ಟಪಡಿಸಿದೆ.
ಫಾಸ್ಟ್ಟ್ಯಾಗ್ ಮೂಲಕ ಮತ್ತು ಲೇನ್ಗಳಲ್ಲಿ ಹಣವನ್ನು ಪಾವತಿಸಬಹುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ. ಈ ಹಿಂದಿನ ಆದೇಶದಲ್ಲಿ, 2021ರ ಜನವರಿ 1 ರಿಂದ ಫಾಸ್ಟ್ಯಾಗ್ ಅಳವಡಿಸಲು ಕಡ್ಡಾಯಗೊಳಿಸಿತ್ತು. ಟೋಲ್ ಪ್ಲಾಜಾಗಳಲ್ಲಿನ ನಗದು ಪಥಗಳನ್ನು ಮುಚ್ಚಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ತಿಳಿಸಿತ್ತು.
ಈ ನಡುವೆ ಟೋಲ್ ಪ್ಲಾಜಾಗಳಲ್ಲಿ ನಗದು ಲೇನ್ ಸೌಲಭ್ಯವನ್ನು ಫೆಬ್ರವರಿ 15ರವರೆಗೆ ವಿಸ್ತರಿಸಲಾಗುವುದು ಎಂದು ಸರ್ಕಾರ ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಡಿಸೆಂಬರ್ 1, 2017 ಕ್ಕೆ ಮೊದಲು ಮಾರಾಟವಾದ ಎಂ ಮತ್ತು ಎನ್ ವಿಭಾಗದ ಮೋಟಾರು ವಾಹನಗಳಲ್ಲಿ ಫಾಸ್ಟ್ಯಾಗ್ ಅನ್ನು 2021 ರ ಜನವರಿ 1 ರಿಂದ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿತ್ತು. ಎಂ ವರ್ಗವು ಕನಿಷ್ಠ ನಾಲ್ಕು ಚಕ್ರಗಳು, ಆದರೆ ಎನ್ ವರ್ಗವು ಸರಕು ಸಾಗಣೆ ವಾಹನಗಳು ಮತ್ತು ಪ್ರಯಾಣಿಕರ ವಾಹಕಗಳನ್ನು ಒಳಗೊಂಡಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, "ಕಾಯ್ದೆಯ ಪ್ರಕಾರ, 2021 ರ ಜನವರಿ 1 ರಿಂದ ಫಾಸ್ಟ್ಟ್ಯಾಗ್ಗೆ ಹೊಂದಿಕೊಳ್ಳುವುದು ಕಡ್ಡಾಯವಾಗಿದೆ. ಆದಾಗ್ಯೂ, ನಗದು ಪಥಗಳು ಫೆಬ್ರವರಿ 15 ರವರೆಗೆ ಕಾರ್ಯನಿರ್ವಹಿಸುತ್ತವೆ."