ಶಿವಮೊಗ್ಗ,ಡಿ.31(DaijiworldNews/HR): ತಿಂಗಳೊಳಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಗ್ರಾಮ ಪಂಚಾಯತಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಬಳಿಕ ಅವರಿಗೆ ಕ್ರಿಯಾ ಯೋಜನೆ ಸಿದ್ಧಪಡಿಸುವಿಕೆ ಕುರಿತು ತರಬೇತಿ ನೀಡಲಾಗುವುದು" ಎಂದರು.
ಇನ್ನು "ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾಗಿರುವ ರಾಜ್ಯದ 92,131 ಸದಸ್ಯರಿಗೆ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯಿಂದ ಜನವರಿ 19ರಿಂದ ಮಾರ್ಚ್ 26ರವರೆಗೆ ತಾಲ್ಲೂಕು ಹಂತದಲ್ಲಿ ತರಬೇತಿಗಳನ್ನು ನೀಡಲಿದ್ದು, ರಾಜ್ಯದ 176 ತಾಲ್ಲೂಕುಗಳ 285 ಕೇಂದ್ರಗಳಲ್ಲಿ ತರಬೇತಿ ನಡೆಯಲಿದೆ" ಎಂದು ತಿಳಿಸಿದ್ದಾರೆ.
"ಗ್ರಾಮ ಪಂಚಾಯತ್ ಸದಸ್ಯರುಗಳಿಗೆ 15 ವಿಷಯಾಧಾರಿತ ಅಧಿವೇಶನಗಳು ಮತ್ತು ಕೌಶಲ ಮಾಹಿತಿ ನೀಡಲಾಗುತ್ತದೆ, ಜೊತೆಗೆ ಸದಸ್ಯರಿಗೆ ಪ್ರಯಾಣ ಭತ್ಯೆ, ಭಾಗವಹಿಸುವಿಕೆ ಭತ್ಯೆ ನೀಡಲಾಗುವುದು" ಎಂದು ತಿಳಿಸಿದ್ದಾರೆ.