ಚಿಕ್ಕಬಳ್ಳಾಪುರ, ಡಿ.31 (DaijiworldNews/PY): "ಬಿಜೆಪಿ ಪಕ್ಷ ಎನ್ನುವ ರೈಲಿನೊಂದಿಗೆ ಜೆಡಿಎಸ್ ಪಕ್ಷವೆನ್ನುವ ಬೋಗಿಯೂ ಕೂಡಾ ಸೇರಿಕೊಂಡರೆ ದೆಹಲಿಗೆ ತಲುಪಬಹುದು. ಇಲ್ಲವಾದಲ್ಲಿ ಹಳ್ಳಿಯಲ್ಲೇ ಉಳಿಯಬೇಕಾದಿತು" ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ವಿಧಾನಸಭಾ ಕ್ಷೇತ್ರದ ಗ್ರಾ.ಪಂ ಚುನಾವಣೆ ಫಲಿತಾಂಶ ಸಂಬಂಧ ಮಾತನಾಡಿದ ಅವರು, "ಈ ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 469 ಸ್ಥಾನಗಳ ಪೈಕಿ 340 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದಾರೆ. ಇದರೊಂದಿಗೆ ನಮ್ಮ ಪಕ್ಷಕ್ಕೆ 40 ಮಂದಿ ಇತರ ಪಕ್ಷ ಹಾಗೂ ಪಕ್ಷೇತರರು ಸೇರ್ಪಡೆಯಾಗಲಿದ್ದಾರೆ. ನಿಟ್ಟಿನಲ್ಲಿ ಕ್ಷೇತ್ರದ 29 ಪಂಚಾಯತ್ಗಳಲ್ಲಿ ಬಿಜೆಪಿಬೆಂಬಲಿತರೇ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ" ಎಂದು ತಿಳಿಸಿದರು.
"ಕಾಂಗ್ರೆಸ್ ಯಾವ ಸ್ಥಿತಿಗೆ ತಲುಪಿದೆ ಎನ್ನುವ ವಿಚಾರದ ದೇಶದ ಜನರಿಗೆ ತಿಳಿದಿದೆ. ಆದರೆ, ಜೆಡಿಎಸ್ ಇನ್ನೂ ಕೂಡಾ ದಕ್ಷಿಣ ಕರ್ನಾಟಕದಲ್ಲಿ ಶಕ್ತಿ ಹೊಂದಿದೆ. ಇನ್ನು ಮುಂದೆ ಯಾವತ್ತಿಗೂ ಕೂಡಾ ಜೆಡಿಎಸ್ನವರು ಕಾಂಗ್ರೆಸ್ಸಿಗರ ಸಹವಾಸ ಮಾಡಲು ಹೋಗಲ್ಲ. ಜೆಡಿಎಸ್ನವರು ನಮ್ಮ ಕ್ಷೇತ್ರದಲ್ಲಿ ನಮ್ಮೊಂದಿಗೆ ಬಂದರೆ ಉತ್ತಮ ಆಡಳಿತ ನಡೆಸಲು ಬೋನಸ್ ಸಿಕ್ಕಿದಂತೆ ಆಗುತ್ತದೆ" ಎಂದರು.
"ಜೆಡಿಎಸ್ನವರಿಗೆ ಯಾರೊಂದಿಗೆ ಇದ್ದರೆ ಅವರಿಗೆ ಉತ್ತಮ ಎನ್ನುವ ವಿಚಾರ ತಿಳಿದಿದೆ. ಜೆಡಿಎಸ್ನವರು ಕಾಂಗ್ರೆಸ್ ಜೊತೆ ಹೋದಾಗಲೆಲ್ಲಾ ಅವರ ಅಸ್ತಿತ್ವ ಹಾಳಾಗಿದೆ. ಅಲ್ಲದೇ, ತಮ್ಮ ಶಾಸಕರನ್ನೂ ಕೂಡಾ ಕಳೆದುಕೊಂಡಿದೆ" ಎಂದು ಹೇಳಿದರು.