ತಿರುವನಂತಪುರಂ, ಡಿ. 31 (DaijiworldNews/MB) : ಮೂರು ಕೃಷಿ ಕಾಯ್ದೆಗಳ ವಿರುದ್ದ ಕೇರಳ ರಾಜ್ಯ ಸರ್ಕಾರ ಅಂಗೀಕರಿಸಿದ ನಿರ್ಣಯಕ್ಕೆ ಶಾಸಕ ಒ ರಾಜಗೋಪಾಲ್ ಬೆಂಬಲ ಸೂಚಿದ ನಿಟ್ಟಿನಲ್ಲಿ ಶಾಸಕ ಒ ರಾಜಗೋಪಾಲ್ರೊಂದಿಗೆ ಬಿಜೆಪಿಯ ಕೇರಳ ನಾಯಕತ್ವವು ಮಾತನಾಡಲಿದೆ. ಹಾಗೆಯೇ ಶಾಸಕರ ಈ ನಡೆಯಿಂದಾಗಿ ಪಕ್ಷಕ್ಕೆ ಆಘಾತ ಉಂಟಾಗಿದೆ ಎಂದು ಮೂಲಗಳು ತಿಳಿಸಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯ ಮುಖ್ಯಸ್ಥ ಕೆ. ಸುರೇಂದ್ರನ್, "ನಾನು ರಾಜಗೋಪಾಲ್ ಅವರ ಪತ್ರಿಕಾಗೋಷ್ಠಿಯನ್ನು ನೋಡಿಲ್ಲ, ಅವರು ಏನು ಹೇಳಿದ್ದಾರೆಂದು ನನಗೆ ತಿಳಿದಿಲ್ಲ. ನಾನು ಅವರೊಂದಿಗೆ ಮಾತನಾಡುತ್ತೇನೆ ಮತ್ತು ನಿಮಗೆ ತಿಳಿಸುತ್ತೇನೆ" ಎಂದು ಹೇಳಿದ್ದಾರೆ.
ಕೃಷಿ ಕಾನೂನುಗಳ ಬಗ್ಗೆ ಬಿಜೆಪಿಯೊಳಗೆ ಎರಡು ಅಭಿಪ್ರಾಯಗಳಿವೆಯೇ ಎಂದು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ನೀವು ಏನು ಹೇಳುತ್ತಿದ್ದೀರಿ? ಕೇರಳ ಬಿಜೆಪಿ ನಾಯಕರಲ್ಲಿ ಕೃಷಿ ಕಾಯಿದೆಗಳ ಬಗ್ಗೆ ಎರಡು ಅಭಿಪ್ರಾಯಗಳಿಲ್ಲ" ಎಂದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್ ಅವರು ಆಲಪ್ಪುಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, "ರಾಜಗೋಪಾಲ್ ಹಿರಿಯ ನಾಯಕ ಮತ್ತು ಅವರು ಈ ನಿರ್ಣಯವನ್ನು ಬೆಂಬಲಿಸುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯವನ್ನು ತಂದಿದ್ದಕ್ಕಾಗಿ ಅವರು ಈ ಹಿಂದೆ ರಾಜ್ಯ ಸರ್ಕಾರವನ್ನು ವಿರೋಧಿಸಿದ್ದರು. ಆದರೆ ಈಗ ಏನಾಯಿತು ಎಂದು ತಿಳಿದಿಲ್ಲ. ನಾನು ಪರಿಶೀಲಿಸುತ್ತೇನೆ" ಎಂದು ಹೇಳಿದ್ದಾರೆ.
ಇಬ್ಬರೂ ಹಿರಿಯ ನಾಯಕರು ಕೂಡಾ ಶಾಸಕ ಒ ರಾಜಗೋಪಾಲ್ ನಡೆಯಿಂದಾಗಿ ನಮಗೆ ಆಶ್ಚರ್ಯವಾಗಿದೆ ಎಂದು ತಿಳಿಸಿದ್ದಾರೆ.
"ಪಕ್ಷವು ಅಕ್ಷರಶಃ ಆಘಾತದಲ್ಲಿದೆ, ಈ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ನಮಗೆ ತಿಳಿದಿಲ್ಲ. ಈ ಬೆಳವಣಿಗೆಯ ಬಗ್ಗೆ ಬಿಜೆಪಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ" ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಕೇಂದ್ರದಲ್ಲಿ ವಾಜಪೇಯಿ ಸರ್ಕಾರವಿರುವಾಗ ರಾಜಗೋಪಾಲ್ ಅವರು ರೈಲ್ವೆ, ರಕ್ಷಣಾ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿದ್ದರು. ಕೇರಳ ವಿಧಾನಸಭೆಗೆ ಪ್ರವೇಶಿಸಿದ ಮೊದಲ ಬಿಜೆಪಿ ನಾಯಕ ಇವರಾಗಿದ್ದಾರೆ.
ರಾಜಗೋಪಾಲ್ ಅವರು ಈ ಹಿಂದೆ ಸ್ಪೀಕರ್ ಹುದ್ದೆಗೆ ಮತದಾನ ನಡೆಯುವ ಸಂದರ್ಭದಲ್ಲಿ ಎಡ ಪಕ್ಷದ ಶ್ರೀರಾಮಕೃಷ್ಣನ್ ಅವರನ್ನು ಬೆಂಬಲಿಸುವ ಮೂಲಕ ವಿವಾದವನ್ನು ಸೃಷ್ಟಿಸಿದ್ದರು. ಆಗ ಅವರು, "ಶ್ರೀ ರಾಮಕೃಷ್ಣ ಅವರ ಹೆಸರಿಗೆ ಭಗವಾನ್ ರಾಮ ಹಾಗೂ ಶ್ರೀಕೃಷ್ಣ ದೇವರ ಹೆಸರು ಇರುವುದರಿಂದ ಅವರಿಗೆ ಬೆಂಬಲ ಸೂಚಿಸಿದ್ದೇನೆ" ಎಂದು ಹೇಳಿಕೊಂಡಿದ್ದರು.
ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಪ್ರಸ್ತುತ ಸಂಘದ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ತಿರುವನಂತಪುರದಲ್ಲಿದ್ದಾರೆ. ಅಸೆಂಬ್ಲಿಯಲ್ಲಿ ಹಿರಿಯ ಬಿಜೆಪಿ ನಾಯಕ ತೆಗೆದುಕೊಂಡ ನಿಲುವನ್ನು ಬಿಜೆಪಿ ಮತ್ತು ಆರ್ಎಸ್ಎಸ್ನ ಉನ್ನತ ಸ್ಥಾನಗಳಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.