ಬೆಂಗಳೂರು, ಡಿ.31 (DaijiworldNews/PY): ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಅನಂತಕುಮಾರ ಹೆಗಡೆ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಚಿವ ತೇಜಸ್ವಿ ಸೂರ್ಯ ಕೂಡಾ ಪಾದರಾಯನಪುರ ಅಡ್ಡ ರಸ್ತೆಗಳಿಗೆ ಮುಸ್ಲಿಮರ ಹೆಸರುಗಳನ್ನು ಇಡುವ ಬಿಬಿಎಂಪಿ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ತೀರ್ಮಾನವನ್ನು ಪ್ರಶ್ನಿಸಿ ಆಯುಕ್ತರಿಗೆ ಪತ್ರ ಬರೆದಿರುವ ತೇಜಸ್ವಿ ಸೂರ್ಯ, "ಪಾದರಾಯನಪುರ ಅಡ್ಡ ರಸ್ತೆಗಳಿಗೆ ಮುಸ್ಲಿಮರ ಹೆಸರುಗಳನ್ನು ಇಡುವ ಬಿಬಿಎಂಪಿ ತೀರ್ಮಾನವನ್ನು ನಾನೂ ಕೂಡಾ ಖಂಡಿಸುತ್ತೇನೆ" ಎಂದಿದ್ದಾರೆ.
"ಬಿಬಿಎಂಪಿಯು ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಿಗೆ ಮುಸ್ಲಿಮರ ಹೆಸರುಗಳನ್ನೇ ಶಿಫಾರಸ್ಸು ಮಾಡಿದ್ದು, ಈ ತೀರ್ಮಾನವು ಭಾರತ ಹಾಗೂ ಪಾಕ್ ವಿಭಜನೆಗೆ ಮೂಲವಾಗಿದ್ದ ದ್ವಿರಾಷ್ಟ್ರ ಸಿದ್ಧಾಂತದ ಪಳೆಯುಳಿಕೆಯ ರೀತಿ ಇದೆ" ಎಂದು ಹೇಳಿದ್ದಾರೆ.
"ಬಿಬಿಎಂಪಿಯ ಈ ಪ್ರಸ್ತಾವಕ್ಕೆ ನನ್ನ ಸಂಪೂರ್ಣವಾದ ವಿರೋಧವಿದೆ. ತಕ್ಷಣವೇ ಈ ತೀರ್ಮಾನದಿಂದ ಪಾಲಿಕೆ ಹಿಂದೆ ಸರಿಯಬೇಕು. ಮುಸ್ಲಿಂ ಹೆಸರುಗಳ ಹಡಸರುಗಳ ನಾಮಕರಣದ ಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳಬೇಕು" ಎಂದಿದ್ದಾರೆ.
ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಅನಂತಕುಮಾರ ಹೆಗಡೆ ಅವರು ಕೂಡಾ ಈ ಸಂಬಂಧ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.