ಬೆಂಗಳೂರು,ಡಿ.31(DaijiworldNews/HR): "ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಅವರ ಸಾವಿನ ಕುರಿತು ಪ್ರಾಥಮಿಕ ತನಿಖೆಯ ವರದಿ ಆಧರಿಸಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು" ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಧರ್ಮೇಗೌಡರ ಮೃತದೇಹದ ಬಳಿ ದೊರೆತೆ ಡೆತ್ ನೋಟ್ ವಶಕ್ಕೆ ಪಡೆಯಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬರಬೇಕಿದೆ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ವರದಿ, ಅಂಗಾಂಗ ಪರೀಕ್ಷಾ ವರದಿಗಳನ್ನು ನಿರೀಕ್ಷಿಸಲಾಗುತ್ತಿದೆ" ಎಂದರು.
ಇನ್ನು "ಧರ್ಮೇಗೌಡ ಅವರ ಸಾವಿನ ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರು ಹೇಳಿರುವುದು ಸರ್ಕಾರದ ಗಮನದಲ್ಲಿದ್ದು, ಪ್ರಾಥಮಿಕ ತನಿಖಾ ವರದಿ ಲಭ್ಯವಾದ ಬಳಿಕ ಮುಂದಿನ ತನಿಖೆ ಕುರಿತು ನಿರ್ಧರಿಸಲಾಗುವುದು" ಎಂದು ಹೇಳಿದ್ದಾರೆ.