ನವದೆಹಲಿ, ಡಿ.31 (DaijiworldNews/PY): ಕೇಂದ್ರ ಸರ್ಕಾರ ಹಾಗು ರೈತರ ನಡುವೆ ಹೊಸ ಕೃಷಿ ಕಾಯ್ದೆಗಳಿಗೆ ಸಂಬಂಧಪಟ್ಟಂತೆ ಬುಧವಾರ ನಡೆದ ಆರನೇ ಸುತ್ತಿನ ಮಾತುಕತೆಯೂ ಕೂಡಾ ಅಪೂರ್ಣಗೊಂಡಿದ್ದು, ರೈತರು ಗುರುವಾರವೂ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ವಿದ್ಯುತ್ ದರ ಹೆಚ್ಚಳ ಹಾಗೂ ಕೃಷಿತ್ಯಾಜ್ಯ ಸುಟ್ಟರೆ ರೈತರಿಗೆ ದಂಡ ವಿಧಿಸುವ ಬಗ್ಗೆ ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ಮಧ್ಯೆ ಸಹಮತ ಏರ್ಪಟ್ಟಿದ್ದು, ಆದರೆ, ಇನ್ನೂ ಕೂಡಾ ಕೃಷಿ ಕಾಯ್ದೆ ಬಗ್ಗೆ ಮಾತುಕತೆ ಸಂಪೂರ್ಣವಾಗಿಲ್ಲ.
ಬುಧವಾರದಂದು ಕೇಂದ್ರ ಮೂವರು ಸಚಿವರು ಹಾಗೂ 41 ರೈತ ಪ್ರತಿನಿಧಿಗಳ ಮಧ್ಯೆ ಆರನೇ ಸುತ್ತಿನ ಮಾತುಕತೆ ನಡೆದಿದೆ. ಈ ಸಂದರ್ಭ ಉಭಯ ತಂಡಗಳ ನಡುವೆ ಎರಡೂ ವಿಷಯಗಳ ನಡುವೆ ಸಮ್ಮತಿ ಏರ್ಪಟ್ಟಿದೆ.
ಈ ವೇಳೆ ಮಾತನಾಡಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, "ಇನ್ನುಳಿದಂತ ವಿಚಾರಗಳ ಬಗ್ಗೆ ಜ.4ರಂದು ಚರ್ಚಿಸಲಾಗುವುದು" ಎಂದಿದ್ದಾರೆ.
ರೈತರು ಸಿಂಘು, ಘಾಜಿಪುರ ಹಾಗೂ ಟಿಕ್ರಿ ಗಡಿಯಲ್ಲಿ ತಮ್ಮ ಪ್ರತಿಭಟನೆ ಮುಂದುವರೆಸಿದ್ದು, ಈ ಹಿನ್ನೆಲೆ ನೂರಾರು ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಪ್ರತಿಭಟನೆಯಿಂದಾಗಿ ವಾಹನಗಳ ದಟ್ಟಣೆಯೂ ಕೂಡಾ ಹೆಚ್ಚಾಗಿದ್ದು, ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.
ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಸಂಚಾರ ಪೊಲೀಸರು, "ದೆಹಲಿ ಗಡಿ ಪ್ರದೇಶಗಳಲ್ಲಿ ರೈತರು ತಮ್ಮ ಪ್ರತಿಭಟನೆ ಮುಂದುವರೆಸಿದ್ದು, ಇಲ್ಲಿನ ರಸ್ತೆಗಳೂ ಕೂಡಾ ಬಂದ್ ಆಗಿವೆ. ಜನರಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ" ಎಂದಿದ್ದಾರೆ.