ಗುಜರಾತ್, ಡಿ.31 (DaijiworldNews/PY): "ಕಳೆದ ವರ್ಷವನ್ನು ವೈದ್ಯರು, ಆರೋಗ್ಯ ವಲಯದಲ್ಲಿ ಮುಂಚೂಣಿಯಲ್ಲಿ ಕರ್ತವ್ಯ ಸಲ್ಲಿಸಿದ ಕೊರೊನಾ ವಾರಿಯರ್ಸ್ಗಳನ್ನು ಸ್ಮರಿಸುವ ವರ್ಷವಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇಂದು ಗುಜರಾತ್ನ ರಾಜ್ ಕೋಟ್ ನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಶಂಕುಸ್ಥಾಪನೆ ನೆರವೇರಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, "ವರ್ಷದ ಕೊನೆಯ ದಿನವೆಂದರೆ, ಭಾರತದ ಲಕ್ಷಾಂತರ ವೈದ್ಯರು, ಆರೋಗ್ಯ ಯೋಧರು, ಕಾರ್ಮಿಕರು ಹಾಗೂ ಮುಂಚೂಣಿಯಲ್ಲಿ ಸೇವೆ ಸಲ್ಲಿಸಿದ ಕೊರೊನಾ ಯೋಧರನ್ನು ಸ್ಮರಿಸುವುದು. ತಮ್ಮ ಕರ್ತವ್ಯವನ್ನು ಪೂರೈಸಿ, ತಮ್ಮ ಜೀವನವನ್ನು ಮುಡಿಪಾಗಿಟ್ಟ ಕೊರೊನಾ ವಾರಿಯರ್ಸ್ಗಳಿಗೆ ನಾನು ವಂದನೆಗಳು" ಎಂದರು.
"ಈ ವರ್ಷ ಎಷ್ಟು ಪರಿಣಾಮಕಾರಿಯಾಗಿದೆ ಎನ್ನುವುದನ್ನು ತಿಳಿಸಿಕೊಟ್ಟಿದೆ. ನಾವೆಲ್ಲರೂ ಜೊತೆಯಾಗಿದ್ದರೆ ಅತ್ಯಂತ ಕಷ್ಟಕರವಾದ ಪರಿಸ್ಥಿತಿಯನ್ನು ಕೂಡಾ ನಿಭಾಯಿಸಬಹುದಾಗಿದೆ" ಎಂದು ಹೇಳಿದರು.
"2020ನೇ ಇಸವಿ ನಮಗೆ ಆರೋಗ್ಯವೇ ಭಾಗ್ಯ ಎನ್ನುವುದನ್ನು ತಿಳಿಸಿಕೊಟ್ಟಿದೆ. ಈ ವರ್ಷ ಸವಾಲುಗಳಿಂದ ಕೂಡಿದ ವರ್ಷವಾಗಿತ್ತು. ಹೊಸ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯ ನೀತಿಯೊಂದಿಗೆ 2020ನೇ ವರ್ಷಕ್ಕೆ ನಾವು ವಿದಾಯ ಹೇಳೋಣ . ಈ ವರ್ಷದ ಅನುಭವಗಳ ಜೊತೆಗೆ ಮುಂದಿನ ವರ್ಷದ ಆದ್ಯತೆಗಳ ಜೊತೆ ಹೆಜ್ಜೆ ಇಡೋಣ" ಎಂದರು.
"ಆರೋಗ್ಯಕ್ಕೆ ಯಾವುದೇ ಸಮಸ್ಯೆಗಳು ಉಂಟಾದಾಗ ಜೀವನದ ಪ್ರತಿಯೊಂದು ವಿಷಯದ ಮೇಮಲೂ ತೀವ್ರವಾದ ಪರಿಣಾಮ ಬೀರುತ್ತದೆ. ಕೇವಲ ಕುಟುಂಬಕ್ಕೆ ಮಾತ್ರವಲ್ಲ. ಇಡೀ ಸಮಾಜಕ್ಕೆ ಪರಿಣಾಮ ಬೀರುತ್ತದೆ" ಎಂದು ಹೇಳಿದರು.
"ದೇಶದಲ್ಲಿ ಈಗ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮುಂದಿನ ವರ್ಷ ವಿಶ್ವದ ಅತೀ ದೊಡ್ಡ ಕೊರೊನಾ ಲಸಿಕಾ ಕಾರ್ಯವನ್ನು ನಡೆಸಲು ನಾರು ತಯಾರಿ ನಡೆಸುತ್ತಿದ್ದೇವೆ" ಎಂದು ತಿಳಿಸಿದರು.