ಮಂಗಳೂರು, ಡಿ.31 (DaijiworldNews/PY): "ಈ ಚುನಾವಣೆ ಬಿಜೆಪಿ ಪಾಲಿಗೆ ಯಶಸ್ಸಿನ ಚುನಾವಣೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಜಯ ಪಡೆದಿದ್ದಾರೆ. ಚುನಾವಣೆಗೆ ನಿಂತ ಕಾರ್ಯಕರ್ತರಿಗೆ ಬಿಜೆಪಿ ಬೆಂಬಲ ನೀಡಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "55%ಕ್ಕಿಂತ ಅಧಿಕ ಕಾರ್ಯಕರ್ತರು ಜಯಗಳಿಸಿದ್ದಾರೆ. 29,478 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ವಿಜಯಶಾಲಿಯಾಗಿದ್ದಾರೆ. 24,000 ಕಾಂಗ್ರೆಸ್ ಬೆಂಬಲಿತರು ಜಯಗಳಿಸಿದ್ದಾರೆ. 18,825 ಜೆಡಿಎಸ್ ಬೆಂಬಲಿತರು ಜಯ ಸಾಧಿಸಿದ್ದಾರೆ. 9,753 ಇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ" ಎಂದರು.
"ಬಿಜೆಪಿ ರಾಜ್ಯದಲ್ಲಿ ಸರ್ವವ್ಯಾಪ್ತಿಯಾಗಿ ವಿಸ್ತರಿಸಿದೆ. ಗ್ರಾಮ ಸ್ವರಾಜ್ಯದ ಪರಿಕಲ್ಪನೆಗೆ ಮನ್ನಣೆ ದೊರೆತಿದೆ. ಕಾಂಗ್ರೆಸ್ನ ಗೂಂಡಾಗಿರಿ ಪ್ರವೃತ್ತಿ, ಕುತಂತ್ರ ರಾಜಕಾರಣವನ್ನು ತಿರಸ್ಕಾರ ಮಾಡಿದ್ದಾರೆ. ಕೆಲವು ಕಡೆ ಕಾಂಗ್ರೆಸ್ ಅನ್ನು ತಿರಸ್ಕಾರ ಮಾಡಿ ಎಸ್ಡಿಪಿಐ ಕಡೆ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ನ ಸಂಪ್ರದಾಯಿಕ ಮತಗಳೂ ಕೈ ಬಿಟ್ಟಿದೆ. ಕಾಂಗ್ರೆಸ್ ಠೇವಣಿ ಉಳಿಸಿಕೊಳ್ಳಲೂ ಕೂಡಾ ಪರದಾಡಿದೆ" ಎಂದು ಲೇವಡಿ ಮಾಡಿದರು.
ಎಪಿಎಂಸಿ ಕಾಯ್ದೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಎಪಿಎಂಸಿ ಕಾಯ್ದೆ ವಿಚಾರದಲ್ಲಿ ಜನರನ್ನು ಹುಯಿಲೆಬ್ಬಿಸುವ ಯತ್ನ ಮಾಡಿದೆ. ಆದರೆ. ಫಲಿತಾಂಶ ಇವೆಲ್ಲಕ್ಕೂ ಉತ್ತರ ನೀಡಿದೆ. ಮೋದಿ ಅವರು ಕೃಷಿ ಕಾಯ್ದೆಗೆ ಜನ ಸಂಪೂರ್ಣ ಬೆಂಬಲ ನೀಡಿದ್ದಾರೆ. ಕೃಷಿ ಪ್ರಧಾನವಾಗಿರುವ ಪ್ರದೇಶಗಳಲ್ಲಿ ಬಿಜೆಪಿ ಜಯಗಳಿಸಿದೆ. ಯುವಕರು ಬಿಜೆಪಿಯತ್ತ ಆಕರ್ಷಿತರಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ಸರ್ಕಾರ ಮಾಡಿರುವ ಕಾರ್ಯಕ್ಕೆ ಜನ ಮೆಚ್ಚಿಕೊಂಡಿದ್ದಾರೆ" ಎಂದರು.
ಉಜಿರೆಯಲ್ಲಿ ಪಾಕ್ ಪರ ಎಸ್ಡಿಪಿಐ ಘೋಷಣೆ ಪ್ರಕರಣ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಎಸ್ಡಿಪಿಐ ಉನ್ಮಾದದಿಂದ ರಾಷ್ಟ್ರ ವಿರೋಧಿ ತೋರಿದೆ. ಎಸ್ಡಿಪಿಐ ಅನ್ನು ಭಯೋತ್ಪಾದಕ ಪಕ್ಷ ಅಲ್ಲ" ಎಂದು ಭಾವಿಸಿದ್ದೆವು ಎಂದು ಹೇಳಿದರು.
"ಗೆದ್ದ ಸಂದರ್ಭ ಕಾರ್ಯಕರ್ತರನ್ನು ನಾಯಕರು ನಿಯಂತ್ರಿಸಬೇಕಿತ್ತು. ವಿರೋಧಿ ರಾಷ್ಟ್ರಕ್ಕೆ ಜೈಕಾರ ಹಾಕಿದ್ದಾರೆ. ಎಸ್ಡಿಪಿಐ ನ ಎಲ್ಲಾ ಚಟುವಟಿಕೆಗಳೂ ರಾಷ್ಟ್ರ ವಿರೋಧಿ ಅನ್ನೋದು ಸ್ಪಷ್ಟವಾಗಿದೆ. ಎಸ್ಡಿಪಿಐ ನಿಷೇಧಿಸಬೇಕೋ ಅಥವಾ ಬೇಡವೋ ಅನ್ನೋದು ಎರಡನೇ ವಿಚಾರವಾಗಿದೆ. ಬಿಜೆಪಿ ಸರಕಾರ ಇಂತಹ ವಿಚಾರದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತದೆ" ಎಂದು ತಿಳಿಸಿದರು.
"ಪಿಎಫ್ಐ, ಎಸ್ಡಿಪಿಐ ಗಲಭೆಗೆ ಯತ್ನಿಸುತ್ತಿದೆ. ಎಸ್ಡಿಪಿಐ ಜೊತೆ ಕಾಂಗ್ರೆಸ್ ಸಂಬಂಧವಿಲ್ಲ ಎನ್ನುತ್ತಿದೆ. ಆದರೆ, ರಾತ್ರಿ ಅವರೊಂದಿಗೆ ಕೂತು ಒಪ್ಪಂದ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.