ಶಿವಮೊಗ್ಗ, ಡಿ.31(DaijiworldNews/HR): ನಾನು ಗೋಮಾಂಸ ತಿನ್ನುತ್ತೀನಿ ನೀವು ಏನು ಮಾಡುತ್ತೀರಿ ಎಂದವರಿಗೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ರಾಜ್ಯದ ಜನ ಬೆಂಬಲ ಕೊಟ್ಟಿಲ್ಲ, ಅವರು ಗೋಮಾತೆ ಪೂಜಿಸುವವರಿಗೆ ಬೆಂಬಲ ಕೊಟ್ಟಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿ ಮಾತನಾಡಿದ ಅವರು, "ಚುನಾವಣೆಯಲ್ಲಿ ಪಾಕಿಸ್ತಾನ ಪರ ಜಿಂದಾಬಾದ್ ಕೂಗುವವರಿಗೆ ಬೆಂಬಲ ಕೊಟ್ಟಿಲ್ಲ. ಹಿಂದೂಸ್ಥಾನ್ ಜಿಂದಾಬಾದ್ ಎನ್ನುವ ರಾಮನ ಭಕ್ತರಿಗೆ ಬೆಂಬಲ ಕೊಟ್ಟಿದ್ದಾರೆ" ಎಂದರು.
ಇನ್ನು "ಸಿದ್ದರಾಮಯ್ಯ ಕೂಡ ಜೆಡಿಎಸ್ನಿಂದ ಕಾಂಗ್ರೆಸ್ಗೆ ಬಂದವರು, ಸಿಎಂ ಮಾಡುತ್ತೇವೆ ಎಂದು ಆಸೆ ತೋರಿಸಿದ್ದಕ್ಕೆ ಬಂದಿದ್ದಾರೆ. ನಿಮ್ಮ ಹಿಂಬಾಲಕರು ಕೂಡ ನಿಮ್ಮಂತೆಯೇ ಇದ್ದಾರೆ. ಸಂಘಟನೆ ಮಾಡಿ ಚುನಾವಣೆಗೆ ಬನ್ನಿ, ಸಂಘಟನೆ ಮಾಡದೇ ಚುನಾವಣೆಗೆ ಹೋದರೆ ಸೋಲನುಭವಿಸುತ್ತೀರಿ. ಸೋತು ನಂತರ ನಿಮ್ಮ ಪಕ್ಷದ ನಾಯಕರನ್ನೇ ಬೈಯುತ್ತಾರೆ" ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕತ್ವ ಸತ್ತು ಹೋಗಿದೆ ಎಂಬುದಕ್ಕೆ ಗ್ರಾಮ ಪಂಚಾಯತಿ ಫಲಿತಾಂಶವೇ ಸಾಕ್ಷಿಯಾಗಿದ್ದು, ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅತಿ ಹೆಚ್ಚು ಸ್ಥಾನ ಗೆದ್ದಿದ್ದಾರೆ ಎಂದು ಹೇಳಿದ್ದಾರೆ.