National
ಗ್ರಾ.ಪಂ ಚುನಾವಣೆ - ಸುಳ್ಯದಲ್ಲಿ ಕಾಂಗ್ರೆಸ್ ಧೂಳಿಪಟ - 18 ಪಂಚಾಯತ್ಗಳಲ್ಲಿ ಬಿಜೆಪಿಗೆ ಪ್ರಚಂಡ ಗೆಲುವು
- Thu, Dec 31 2020 12:09:37 PM
-
ಸುಳ್ಯ, ಡಿ.31 (DaijiworldNews/PY): ಸುಳ್ಯದ ಒಟ್ಟು 25 ಗ್ರಾಮ ಪಂಚಾಯತ್ಗಳಲ್ಲಿ 18 ಪಂಚಾಯತ್ಗಳಲ್ಲಿ ಬಿ.ಜೆ.ಪಿ ಬೆಂಬಲಿತರು ಅತ್ಯಧಿಕ ಸಂಖ್ಯೆಯಲ್ಲಿ ಗೆದ್ದು ಅಧಿಕಾರ ಹಿಡಿದಿದ್ದು, 5 ಗ್ರಾಮ ಪಂಚಾಯತ್ಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಹಿಡಿದಿದ್ದಾರೆ.
ಐವರ್ನಾಡು ಮತ್ತು ದೇವಚಳ್ಳ ಪಂಚಾಯತ್ಗಳಲ್ಲಿ ಸ್ವಾಭಿಮಾನಿ ಬಳಗ ಅಧಿಕಾರಕ್ಕೆ ಬಂದಿದ್ದು, 282 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ 168 ಅಭ್ಯರ್ಥಿಗಳು ಮತ್ತು ಕಾಂಗ್ರೆಸ್ ಬೆಂಬಲಿತ 79 ಸದಸ್ಯರು ವಿಜಯಿ ಆಗಿದ್ದಾರೆ. ಪಕ್ಷೇತರರು 35 ಕಡೆಗಳಲ್ಲಿ ವಿಜಯಿ ಆಗಿದ್ದಾರೆ.
ಸುಳ್ಯ ತಾಲೂಕಿನ ಸಂಪಾಜೆ ಗ್ರಾ.ಪಂನಲ್ಲಿ ಒಟ್ಟು 14 ಸ್ಥಾನಗಳಿದ್ದು, ಇದರಲ್ಲಿ ಕಾಂಗ್ರೆಸ್ ಬೆಂಬಲಿತ 13 ಸದಸ್ಯರು ಮತ್ತು 1 ಬಿಜೆಪಿ ಬೆಂಬಲಿತರು ಆಯ್ಕೆ ಆಗಿದ್ದಾರೆ. ಅರಂತೋಡು ಗ್ರಾ.ಪಂನಲ್ಲಿ 15 ಸ್ಥಾನಗಳಲ್ಲಿ 11 ಸ್ಥಾನಗಳು ಬಿಜೆಪಿ ಪಾಲಾದರೆ ಕೇವಲ ತಲಾ 2 ಸ್ಥಾನಗಳು ಕಾಂಗ್ರೆಸ್ ಬೆಂಬಲಿತರು ಮತ್ತು ಪಕ್ಷೇತರರ ಪಾಲಾದವು. ಆಲೆಟ್ಟಿ ಗ್ರಾ.ಪಂ.ನ 21 ಸ್ಥಾನಗಳಲ್ಲಿ 13 ವಾರ್ಡ್ಗಳಲ್ಲಿ ಬಿಜೆಪಿ ಬೆಂಬಲಿತರು ವಿಜಯಿ ಆದರೆ 8 ವಾರ್ಡ್ಗಳಲ್ಲಿ ಕಾಂಗ್ರೆಸ್ ವಿಜಯಿ ಆಗಿದ್ದಾರೆ.
ಮಂಡೆಕೋಲು ಗ್ರಾ.ಪಂ.ನ 15 ಸ್ಥಾನಗಳಲ್ಲಿ 14 ಬಿಜೆಪಿ ಮತ್ತು ಒಬ್ಬ ಕಾಂಗ್ರೆಸ್ ಸದಸ್ಯ ಆಯ್ಕೆ ಆಗಿದ್ದಾರೆ. ಅಜ್ಜಾವರ ಗ್ರಾ.ಪಂ.ನ 18 ಸ್ಥಾನಗಳಲ್ಲಿ 10 ಮಂದಿ ಕಾಂಗ್ರೆಸ್ ಬೆಂಬಲಿತರು ಆಯ್ಕೆ ಆಗಿದ್ದಾರೆ. ಇದರಲ್ಲಿ 5 ಸ್ಥಾನಗಳು ಬಿಜೆಪಿ ಪಾಲಾಗಿದೆ. ಮೂರು ಕ್ಷೇತ್ರದಲ್ಲಿ ಪಕ್ಷೇತರರು ಜಯ ಗಳಿಸಿದ್ದಾರೆ. ಕನಕಮಜಲು ಗ್ರಾಪಂನಲ್ಲಿ 7 ಸ್ಥಾನಗಳಿದ್ದು, ಬಿಜೆಪಿಯ 5 ಮತ್ತು ಕಾಂಗ್ರೆಸ್ 2 ಸದಸ್ಯರನ್ನು ಪಡೆದುಕೊಂಡಿದೆ.
ಜಾಲ್ಸೂರು ಗ್ರಾ.ಪಂ.ನಲ್ಲಿ 17 ಸ್ಥಾನಗಳಿದ್ದು ಬಿಜೆಪಿ 11 ಮತ್ತು ಕಾಂಗ್ರೆಸ್ 3 ಸದಸ್ಯರರು ಮತ್ತು 3 ಮಂದಿ ಪಕ್ಷೇತರರು ಆಯ್ಕೆ ಆಗಿದ್ದಾರೆ. ಐವರ್ನಾಡು ಪಂಚಾಯತ್ನಲ್ಲಿ 13 ಸ್ಥಾನಗಳಿದ್ದು ಇದರಲ್ಲಿ ಬಿಜೆಪಿಯಿಂದ ಬಂಡಾಯವಾಗಿ ಸ್ಪರ್ಧೆ ಮಾಡಿದ ಸ್ವಾಭಿಮಾನಿ ಬಳಗ 12 ವಾರ್ಡ್ಗಳಲ್ಲಿ ಗೆದ್ದು ಅಧಿಕಾರಿ ಪಡೆದುಕೊಂಡಿದೆ. ಒಂದು ಕ್ಷೇತ್ರ ಪಕ್ಷೇತರ ಪಾಲಾಗಿದೆ.
ಅಮರಮೂಡ್ನೂರು ಗ್ರಾ.ಪಂ.ನಲ್ಲಿ ಒಟ್ಟು 17 ಸ್ಥಾನಗಳಿದ್ದು ಇದರಲ್ಲಿ 11 ಸ್ಥಾನಗಳು ಬಿಜೆಪಿ ಬೆಂಬಲಿತರ ಪಾಲಾದರೆ 4 ಸ್ಥಾನಗಳು ಕಾಂಗ್ರೆಸ್ ಬೆಂಬಲಿತರು ಮತ್ತು 2 ಪಕ್ಷೇತರರು ಆಯ್ಕೆ ಆಗಿದ್ದಾರೆ.
ಕಳಂಜ ಗ್ರಾ,ಪಂ.ನಲ್ಲಿ 6 ಸ್ಥಾನಗಳಲ್ಲಿ ಗೆದ್ದು ಬಿಜೆಪಿ ಕ್ಲೀನ್ ಸ್ಲೀಪ್ ಮಾಡಿದೆ.ಬೆಳ್ಳಾರೆ ಗ್ರಾ.ಪಂನಲ್ಲಿ ಒಟ್ಟು 14 ಸ್ಥಾನಗಳಿದ್ದು ಬಿಜೆಪಿಯ 8 ವಾರ್ಡ್ಗಳಲ್ಲಿ ಜಯಗಳಿಸಿ ಅಧಿಕಾರಿ ಒಲಿಸಿಕೊಂಡಿದ್ದಾರೆ. ಕಾಂಗ್ರೆಸ್ಸಿನ 4 ಸದಸ್ಯರು ಮತ್ತು ಇಬ್ಬರು ಎಸ್ಡಿಪಿಐ ಸದಸ್ಯರು ವಿಜಯಿ ಆಗಿದ್ದಾರೆ. ಪೆರುವಾಜೆ ಗ್ರಾ.ಪಂನಲ್ಲಿ 8 ಸ್ಥಾನಗಳಿದ್ದು ಕಾಂಗ್ರೆಸ್ ಬೆಂಬಲಿತರು 5 ವಾರ್ಡ್ಗಳಲ್ಲಿ ಜಯಗಳಿಸಿ ಅಧಿಕಾರ ಪಡೆದುಕೊಂಡಿದ್ದಾರೆ. ಮತ್ತು ಬಿಜೆಪಿಯ 3 ಅಭ್ಯರ್ಥಿಗಳು ವಿಜಯಿ ಆಗಿದ್ದಾರೆ.
ಬಾಳಿಲ ಗ್ರಾ.ಪಂನಲ್ಲಿ 10 ಸ್ಥಾನಗಳಿದ್ದು 9 ಬಿಜೆಪಿ ಸದಸ್ಯರು ಮತ್ತು ಒಬ್ಬರು ಕಾಂಗ್ರೆಸ್ ಸದಸ್ಯರು ಜಯ ಗಳಿಸಿದ್ದಾರೆ.ಕಲ್ಮಡ್ಕದಲ್ಲಿ 9 ಸ್ಥಾನಗಳಿದ್ದು ಎಲ್ಲಾ 9 ಸ್ಥಾನಗಳನ್ನು ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಪಂಜ ಪಂಚಾಯತ್ನಲ್ಲಿ ಒಟ್ಟು 13 ಸ್ಥಾನಗಳಿದ್ದು 10 ಸ್ಥಾನಗಳು ಬಿಜೆಪಿ ಪಾಲಾದರೆ 3 ರಲ್ಲಿ ಕಾಂಗ್ರೆಸ್ ವಿಜಯಿ ಆಗಿದೆ.
ಹರಿಹರ ಪಲ್ಲತಡ್ಕ ಪಂಚಾಯತ್ನ ಒಟ್ಟು 6 ಸ್ಥಾನಗಳಲ್ಲಿ 5 ಸ್ಥಾನಗಳು ಬಿಜೆಪಿಗೆ ಮತ್ತು 1 ಸ್ಥಾನಗಳು ಕಾಂಗ್ರೆಸ್ ಪಾಲಾಗಿದೆ. ಕೊಲ್ಲಮೊಗ್ರ ಪಂಚಾಯತ್ನ ಒಟ್ಟು 8 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿ ಪಂಚಾಯಿತಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ಮಡಪ್ಪಾಡಿ ಗ್ರಾ.ಪಂ.ನ 4 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ. 1 ಸ್ಥಾನ ಬಿಜೆಪಿ ಪಾಲಾಗಿದೆ. ಗುತ್ತಿಗಾರು ಗ್ರಾ.ಪಂ 17 ಸ್ಥಾನಗಳಲ್ಲಿ ಬಿಜೆಪಿ 13 ಸ್ಥಾನಗಳಲ್ಲಿ ಗಳಿಸಿದ್ದಾರೆ. ಉಳಿದ 4 ಸ್ಥಾನಗಳಲ್ಲಿ ಪಕ್ಷೇತರರು ಜಯಗಳಿಸಿದ್ದಾರೆ. ದೇವಚಳ್ಳ ಗ್ರಾ.ಪಂ.ನ 10 ಸ್ಥಾನಗಳಲ್ಲಿ ಸ್ವಾಭಿಮಾನಿ ಬಳಗ 5 ಕಡೆ ಜಯಗಳಿಸಿ ಅಧಿಕಾರಕ್ಕೆ ಬಂದಿದೆ. 4 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ವಿಜಯಿ ಮತ್ತು ಒಂದರಲ್ಲಿ ಕಾಂಗ್ರೆಸ್ ಬೆಂಬಲಿತ ವಿಜಯಿ ಆಗಿದ್ದಾರೆ.
ನೆಲ್ಲೂರು ಕ್ರೆಮಾಜೆಯ 8 ಸ್ಥಾನಗಳಲ್ಲಿ 6 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಜಯಗಳಿದ್ದರೆ, 2 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಜಯಗಳಿಸಿದ್ದಾರೆ. ಉಬರಡ್ಕ ಮಿತ್ತೂರು ಪಂಚಾಯತ್ನ ಒಟ್ಟು 9 ಸ್ಥಾನಗಳಲ್ಲಿ 6 ಸ್ಥಾನಗಳಲ್ಲಿ ಗೆದ್ದು ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದು 3 ಸ್ಥಾನ ಕಾಂಗ್ರೆಸ್ ಬೆಂಬಲಿತರು ಗೆದ್ದುಕೊಂಡಿದ್ದಾರೆ.
ಮರ್ಕಂಜ ಗ್ರಾ.ಪಂ. ನ 9 ಸ್ಥಾನಗಳಲ್ಲಿ 7 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆದ್ದು ತಲಾ ಒಂದರಲ್ಲಿ ಕಾಂಗ್ರೆಸ್ ಮತ್ತು ಪಕ್ಷೇತರರು ಗೆದ್ದಿದ್ದಾರೆ.
ಕೊಡಿಯಾಲ ಗ್ರಾ.ಪಂನ 6 ಸ್ಥಾನಗಳಲ್ಲಿ ಬಿಜೆಪಿ 4 ಸದಸ್ಯರು ಮತ್ತು ಕಾಂಗ್ರೆಸಿನ ಬೆಂಬಲಿತದ 2 ಮಂದಿ ಆಯ್ಕೆ ಆಗಿದ್ದಾರೆ. ಮುರುಳ್ಯ ಗ್ರಾ.ಪಂನ ಒಟ್ಟು 7 ಸ್ಥಾನಗಳಲ್ಲಿ ಬಿಜೆಪಿ ಎಲ್ಲಾ ಸ್ಥಾನಗಳನ್ನು ಗೆದ್ದು ಕ್ಲಿನ್ ಸ್ವೀಪ್ ಮಾಡಿಕೊಂಡಿದೆ.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮಡಪ್ಪಾಡಿ ಗ್ರಾಮದ ಒಂದನೇ ವಾರ್ಡ್ನಿಂದ ಸ್ಪರ್ಧಿಸಿದ್ದ ಸುಳ್ಯ ಎಪಿಎಂಸಿ ಅಧ್ಯಕ್ಷ ಬಿಜೆಪಿ ಬೆಂಬಲಿತ ವಿನಯಕುಮಾರ್ ಮುಳುಗಾಡು ಪರಾಭವಗೊಂಡಿದ್ದಾರೆ. ಇವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಿತ್ರದೇವ ಮಡಪ್ಪಾಡಿ ವಿರುದ್ಧ 21 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ. ಎಪಿಎಂಸಿ ಉಪಾಧ್ಯಕ್ಷ ಬಿಜೆಪಿ ಬೆಂಬಲಿತ ನವೀನ್ ಸಾರಕೆರೆ ಅವರು ಐವರ್ನಾಡು ಗ್ರಾ.ಪಂ.ಎರಡನೇ ವಾರ್ಡ್ ದೇವರಕಾನದಲ್ಲಿ ಸ್ಪರ್ಧಿಸಿ ಸ್ವಾಭಿಮಾನಿ ಬಳಗದ ಎದುರು 302 ಮತ ಪಡೆದು ಪರಾಭವಗೊಂಡಿದ್ದಾರೆ.
ಜಿಲ್ಲಾ ಪಂಚಾಯತ್ನ ಮಾಜಿ ಸದಸ್ಯೆ ಸರಸ್ವತಿ ಕಾಮತ್ ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿ ಬಾಳಿಲ ಗ್ರಾ.ಪಂ.ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಬಾಳಿಲ ಗ್ರಾಮ ಪಂಚಾಯತ್ ಎರಡನೇ ವಾರ್ಡ್ನಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸರಸ್ವತಿ ಕಾಮತ್ 439 ಮತ ಪಡೆದು ವಿಜಯಿಯಾದರು.
ಬಿಜೆಪಿ ಬಂಡಾಯ ಕಾರಣದಿಂದ ಭಾರೀ ಕುತೂಹಲ ಕೆರಳಿಸಿದ್ದ ಐವರ್ನಾಡು ಗ್ರಾಮ ಪಂಚಾಯತ್ನ ಮೂರು ವಾರ್ಡ್ಗಳಲ್ಲಿ ಕ್ಲೀನ್ ಸ್ವೀಪ್ ಮಾಡಿದ ಬಿಜೆಪಿ ಬಂಡಾಯದ ಎಸ್.ಎನ್.ಮನ್ಮಥ ನೇತೃತ್ವದ ಸ್ವಾಭಿಮಾನಿ ಬಳಗ ಗ್ರಾಮ ಪಂಚಾಯಿತಿಯ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈಗ ಫಲಿತಾಂಶ ಹೊರ ಬಂದಿರುವ ಮೂರು ವಾರ್ಡ್ಗಳಲ್ಲಿ 13 ಸ್ಥಾನಗಳಲ್ಲಿ 12ನ್ನು ಗೆಲ್ಲುವ ಮೂಲಕ ಸ್ವಾಭಿಮಾನಿ ಬಳಗ ನಿಚ್ಚಳ ಬಹುಮತ ಪಡೆದಿದೆ. ಒಬ್ಬರು ಪಕ್ಷೇತರ ಅಭ್ಯರ್ಥಿ ಅತ್ಯಧಿಕ ಮತ ಪಡೆದು ವಿಜಯಿ ಆಗಿದ್ದಾರೆ.
ಮತ ಎಣಿಕೆಯ ಕೊಠಡಿಯೊಳಗೆ ನೆಟ್ ಅಳವಡಿಸಿದರೆಂದು ಅಭ್ಯರ್ಥಿಗಳು ಮತ್ತು ಏಜೆಂಟರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ. ದೇವಚಳ್ಳ, ಗುತ್ತಿಗಾರು ಮತ ಎಣಿಕೆ ಕೇಂದ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಿ ಹೊರ ನಡೆಯಲು ಮುಂದಾದರು. ತಹಸೀಲ್ದಾರ್ ಮತ್ತು ಪೊಲೀಸರು ಅವರನ್ನು ಸಮಾಧಾನ ಮಾಡಿ ಎಣಿಕೆ ಪ್ರಕ್ರಿಯೆ ಮುಂದುವರಿಯುವಂತೆ ಮಾಡಿದರು.