ಬೆಳ್ತಂಗಡಿ, ಡಿ. 31 (DaijiworldNews/MB) : ಗ್ರಾಮ ಪಂಚಾಯಿತಿ ಚುನಾವಣೆಯ ವಿಜಯೋತ್ಸವದಲ್ಲಿ ಪಾಕಿಸ್ತಾನ ಪರ ಘೋಷಣೆ ಕೇಳಿ ಬಂದ ಪ್ರಕರಣಕ್ಕೆ ಸಂಬಂಧಿಸಿ ವಿಡಿಯೋ ಹಾಗೂ ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ಮೂರು ಜನರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಪಿಲಿಚಂಡಿ ಕಲ್ಲು ಕುವೆಟ್ಟು ನಿವಾಸಿಗಳಾದ ಮೊಹಮ್ಮದ್ ಹರ್ಷದ್( 22 ), ದಾವೂದ್ ( 36) ಹಾಗೂ ಇಸಾಕ್ (28) ಬಂಧಿತ ಆರೋಪಿಗಳು.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋವನ್ನು ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಆ ವಿಡಿಯೋ ಹೊರತುಪಡಿಸಿ ಈ ಘಟಣೆಗೆ ಸಂಬಂಧಿಸಿದ ಮೊಬೈಲ್ ಮೂಲಕ ಚಿತ್ರೀಕರಿಸಲಾದ ಇತರ ಎರಡು ವೀಡಿಯೊಗಳು ಲಭ್ಯವಾಗಿದ್ದು ಅವುಗಳನ್ನೂ ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಲಾಗಿದೆ.
ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯ ವೇಳೆ ಮತ ಎಣಿಕಾ ಕೇಂದ್ರದ ಹೊರಗೆ ಎಸ್ಡಿಪಿಐ ಹಾಗೂ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವದಲ್ಲಿ ತೊಡಗಿದ್ದಾಗ ಪಾಕಿಸ್ಥಾನ ಪರ ಫೋಷಣೆ ಕೇಳಿಬಂದಿದೆ. ಎಸ್ಡಿಪಿಐ ಹಾಗೂ ಬಿಜೆಪಿ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ಜಮಾಯಿಸಿ ವಿಜಯೋತ್ಸವದ ನಡೆಸುತ್ತಿದ್ದ ವೇಳೆ ಪಾಕಿಸ್ಥಾನ ಜಿಂದಾಬಾದ್ ಎಂಬ ಜೈಕಾರದ ಘೋಷಣೆ ಕೂಗಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆಯು ಉಜಿರೆಯ ಎಸ್ಡಿಎಂ ಪಿಯು ಕಾಲೇಜು ಮತ ಎಣಿಕಾ ಕೇಂದ್ರದ ಮುಂದೆ ನಡೆದಿದೆ ಎನ್ನಲಾಗಿದೆ.