ಬೆಂಗಳೂರು, ಡಿ. 31 (DaijiworldNews/MB) : ''ಪಾದರಾಯನಪುರದ ಅಡ್ಡ ರಸ್ತೆಗಳಿಗೆ ಮುಸ್ಲಿಮರ ಹೆಸರು ಇಟ್ಟರೆ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ'' ಎಂದು ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಅನಂತಕುಮಾರ ಹೆಗಡೆ ಹೇಳಿದ್ದಾರೆ.
ಪಾದರಾಯನಪುರದ ಅಡ್ಡ ರಸ್ತೆಗಳಿಗೆ ಮುಸ್ಲಿಮರ ಹೆಸರುಗಳನ್ನು ಇಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತೀರ್ಮಾನಕ್ಕೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಈ ಸಂಬಂಧ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
''ಈ ವಾರ್ಡ್ನಲ್ಲಿ ಕೇವಲ ಮುಸಲ್ಮಾನರ ಹೆಸರನ್ನು ಮಾತ್ರ ಶಿಫಾರಸ್ಸು ಮಾಡಲಾಗಿದೆ. ಸಮಾಜ ಸೇವಕರ ಹೆಸರಿನಲ್ಲಿ ಕೋಮು ವೈಭವೀಕರಣ ಮಾಡುವುದು ಸರಿಯಲ್ಲ. ಬೃಹತ್ ಬೆಂಗಳೂರು ಮಹಾರನಗರ ಪಾಲಿಕೆಯ ಈ ನಿರ್ಧಾರದಿಂದ ಸಮಾಜದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ'' ಎಂದು ಹೇಳಿದ್ದಾರೆ.
''ಬಿಬಿಎಂಪಿಯಂತೆ ಬಹುಸಂಖ್ಯಾತ ಹಿಂದುಗಳ ಬಾಹುಳ್ಯವಿರುವ ನಗರಸಭೆ/ ಪುರಸಭೆ/ ಪಟ್ಟಣ ಪಂಚಾಯತ್ಗಳು ಇದೇ ನಿರ್ಧಾರವನ್ನು ತೆಗೆದುಕೊಂಡರೆ ಪರಿಸ್ಥಿತಿ ಊಹಿಸಲೂ ಸಾಧ್ಯವಿಲ್ಲ. ಇಂದು ಕೋಮಿನ ತುಷ್ಟೀಕರಣಕ್ಕಾಗಿ ಬಿಬಿಎಂಪಿ ಈ ರೀತಿ ನಿರ್ಣಯ ತೆಗೆದುಕೊಳ್ಳುತ್ತಿರುವುದು ಬೇಜವಾಬ್ದಾರಿತನದ ಪರಮಾವಧಿ ಎಂದು ಭಾವಿಸುತ್ತೇನೆ'' ಎಂದು ಹೇಳಿದ್ದಾರೆ.
''ಹಾಗೇನಾದರೂ ಈ ರಸ್ತೆಗಳಿಗೆ ಹೆಸರನ್ನು ಇಡಕೇಬೇಕಾದ ಅನಿವಾರ್ಯತೆ ಇದ್ದರೆ ಸ್ವಾತಂತ್ಯ್ರಕ್ಕಾಗಿ ಹೋರಾಡಿದ ವೀರ ಯೋಧರ, ರಾಷ್ಟ್ರ ಕಂಡ ಮಹಾನ್ ವ್ಯಕ್ತಿಗಳ, ದೇಶಕ್ಕಾಗಿ ಹೋರಾಡಿದ ವೀರ ಸೈನಿಕರ ಹೆಸರನ್ನು ಇಟ್ಟಲ್ಲಿ ಪಾದರಾಯಣಪುರ ಹೆಸರಿಗೂ ಗೌರವ ದೊರಲುವಂತಾಗುತ್ತದೆ'' ಎಂದಿದ್ದಾರೆ.
''ಬಿಬಿಎಂಪಿಯ ಪಾದರಾಯಣಪುರದ ಅಡ್ಡರಸ್ತೆಗಳುಎಗೆ ಹಾಗೂ ಮುಖ್ಯ ರಸ್ತೆಗಳಿಗೆ ಮುಸಲ್ಮಾನರ ಹೆಸರನ್ನು ನಾಮಕರಣ ಮಾಡಬಾರದು'' ಎಂದು ಆಗ್ರಹಿಸಿದ್ದಾರೆ.