ಬೆಂಗಳೂರು, ಡಿ. 31 (DaijiworldNews/MB) : 5,728 ಗ್ರಾಮ ಪಂಚಾಯಿತಿಗಳ 54,041 ಸ್ಥಾನಗಳ ಫಲಿತಾಂಶವನ್ನು ಬುಧವಾರ ಪ್ರಕಟಿಸಲಾಗಿದೆ. ಇನ್ನುಳಿದ 36,781 ಸ್ಥಾನಗಳ ಫಲಿತಾಂಶವನ್ನು ಗುರುವಾರ ಪ್ರಕಟಿಸಲಾಗುವುದು ಎಂದು ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಬುಧವಾರ ತಿಳಿಸಿದೆ.
ಮತಪತ್ರಗಳ ಬಳಕೆಯಿಂದಾಗಿ ಎಣಿಕೆ ಕಾರ್ಯ ಇನ್ನೂ ಪ್ರಕ್ರಿಯೆಯಲ್ಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಹೇಳಿದೆ.
"ಪ್ರತಿ ಮತವನ್ನು ಎಣಿಸಬೇಕಾಗಿದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಭಾರೀ ಸ್ಪರ್ಧೆಯಿದ ಕಡೆ ಮರು ಎಣಿಕೆ ಮಾಡಬೇಕಾದ ಸ್ಥಿತಿ ಬಂದೊದಗಿದೆ. ಆದ್ದರಿಂದ, ಎಣಿಕೆ ನಿಧಾನಗತಿಯಲ್ಲಿ ನಡೆಯುತ್ತಿದೆ" ಎಂದು ಮತದಾನದ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.
ಪಕ್ಷದ ಚಿಹ್ನೆಗಳಿಲ್ಲದೆ ಈ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರೂ, ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕರ್ನಾಟಕದ ಪ್ರತಿಪಕ್ಷ ಕಾಂಗ್ರೆಸ್ ಬೆಂಬಲ ಸೂಚಿಸಿದ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ನಮ್ಮ ಪಕ್ಷದಿಂದ ಬೆಂಬಲಿತವಾದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುತ್ತಿದ್ದಾರೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಮತ್ತು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಜನ ಪರ ನೀತಿಗಳು ತಳಮಟ್ಟದಲ್ಲಿ ಕಾರ್ಯನಿರ್ವಹಿಸಿವೆ" ಎಂದು ಕಟೀಲ್ ಹೇಳಿದರು.
ಘೋಷಿತ ಫಲಿತಾಂಶಗಳಲ್ಲಿ, ಕನಿಷ್ಠ ಮೂರು ಅಲ್ಪಸಂಖ್ಯಾತ ಅಭ್ಯರ್ಥಿಗಳು ಗೆದ್ದಿದ್ದಾರೆ. ಅನೇಕ ಸ್ಥಾನಗಳಲ್ಲಿ ಭಾರೀ ಸ್ಪರ್ಧೆ ಉಂಟಾಗಿದೆ. ಹಲವಾರು ಸ್ಥಾನಗಳಲ್ಲಿ, ತಂದೆ ಮತ್ತು ಮಗ, ತಾಯಿ ಮತ್ತು ಮಗಳು, ಸೊಸೆ ಮತ್ತು ಅತ್ತೆ ಯಂತಹ ನಿಕಟ ಸಂಬಂಧಿಗಳು ಸ್ಪರ್ಧಿಸಿದ್ದರು.
ಡಿಸೆಂಬರ್ 22 ರಂದು ಮೊದಲ ಹಂತದಲ್ಲಿ 43,238 ಸ್ಥಾನಗಳಿಗೆ ಚುನಾವಣೆ ನಡೆದರೆ, ಎರಡನೇ ಹಂತದಲ್ಲಿ 39,378 ಸ್ಥಾನಗಳಿಗೆ ಡಿಸೆಂಬರ್ 27 ರಂದು ಮತದಾನ ನಡೆದಿದೆ.
ಮೊದಲ ಹಂತದಲ್ಲಿ ಶೇ. 82 ರಷ್ಟು ಮತದಾನವಾಗಿದೆ. ಎರಡನೇ ಹಂತದಲ್ಲಿ ಶೇ. 81 ಕ್ಕಿಂತ ಮತದಾನವಾಗಿದೆ.