ನವದೆಹಲಿ,ಡಿ.30 (DaijiworldNews/HR): ಉತ್ತರ ಪ್ರದೇಶವು ದ್ವೇಷ ರಾಜಕಾರಣದ ಕೇಂದ್ರವಾಗಿದೆ ಮತ್ತು ಆಡಳಿತದ ಸಂಸ್ಥೆಗಳು ಕೋಮು ವಿಷಯದಲ್ಲಿ ಮುಳುಗಿವೆ ಎಂದು ಆರೋಪಿಸಿ 104 ನಿವೃತ್ತ ನಾಗರಿಕ ಸೇವೆ ಅಧಿಕಾರಿಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.
ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮ ರಾವ್, ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಶಿವಶಂಕರ್ ಮೆನನ್, ಮುಖ್ಯ ಮಾಹಿತಿ ಆಯುಕ್ತರಾಗಿದ್ದ ವಜಾಹತ್ ಹಬಿಬುಲ್ಲಾ ಅವರೂ ಈ ಪತ್ರಕ್ಕೆ ಸಹಿ ಹಾಕಿದ್ದು, ಇತ್ತೀಚೆಗೆ ರಾಜ್ಯದಲ್ಲಿ ಜಾರಿಗೊಳಿಸಲಾಗಿದ್ದ ಮತಾಂತರ ತಡೆ ಸುಗ್ರೀವಾಜ್ಞೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಮೊರದಾಬಾದ್ನಲ್ಲಿ 22 ವರ್ಷದ ರಶೀದ್ ಹಾಗೂ ಆತನ ಅಣ್ಣ 25 ವರ್ಷದ ಸಲೀಂನನ್ನು ಪೊಲೀಸರು ಬಂಧಿಸಿದ್ದರು. ರಶೀದ್ ಪತ್ನಿ, ಪಿಂಕಿ ‘ಯಾವುದೇ ಒತ್ತಡ ಅಥವಾ ಒತ್ತಾಯವಿಲ್ಲದೆ, ತನ್ನಿಚ್ಛೆಯಂತೆ ರಶೀದ್ನನ್ನು ಮದುವೆಯಾಗಿದ್ದೇನೆ’ ಎಂದು ಲಿಖಿತ ಹೇಳಿಕೆ ನೀಡಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಇನ್ನು ಡಿಸೆಂಬರ್ 5ರಂದು ವಿವಾಹದ ನೋಂದಣಿ ಮಾಡಿಕೊಳ್ಳಲು ತೆರಳುವ ವೇಳೆಗೆ ಬಜರಂಗ ದಳದ ಕಾರ್ಯಕರ್ತರು ಇದು ಲವ್ ಜಿಹಾದ್ ಎಂದು ಆರೋಪಿಸಿ ರಶೀದ್ನನ್ನು ಪೊಲೀಸರಿಗೆ ಒಪ್ಪಿಸಿದ್ದರು. ಪಿಂಕಿಗೆ ಅವರು ನೀಡಿದ ಹಿಂಸೆಯಿಂದಾಗಿ ಗರ್ಭಪಾತವಾಗಿತ್ತು. ಇದು ಇನ್ನೂ ಹುಟ್ಟದ ಮಗುವಿನ ಕೊಲೆ ಅಲ್ಲವೇ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.