ಬೆಂಗಳೂರು, ಡಿ.30 (DaijiworldNews/PY): "ರೂಪಾಂತರಿ ಕೊರೊನಾ ವೈರಸ್ ರಾಜ್ಯದಲ್ಲೂ ಕೂಡಾ ಪತ್ತೆಯಾಗಿರುವ ಕಾರಣ ರಾತ್ರಿ ಕರ್ಫ್ಯೂ ಜಾರಿಯೊಂದಿಗೆ ನಿರ್ಬಂಧನೆಗಳನ್ನು ಕೂಡಾ ಜಾರಿಗೊಳಿಸಬೇಕಿದೆ" ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾತ್ರಿ ಕರ್ಫ್ಯೂ ಜಾರಿಯ ಅವಶ್ಯಕತೆ ಇದೆ" ಎಂದು ಹೇಳಿದ್ದಾರೆ.
"ರಾತ್ರಿ ಕರ್ಫ್ಯೂ ವಿಚಾರವಾಗಿ ನಾನು ಸಿಎಂ ಅವರೊಂದಿಗೆ ಚರ್ಚೆ ಮಾಡುತ್ತೇನೆ. ರಾಜ್ಯದಲ್ಲಿಯೂ ಕೂಡಾ ಬಿಗಿಯಾದ ಕ್ರಮಗಳನ್ನು ಜಾರಿಗೆ ತರುವ ವಿಚಾರವಾಗಿ ಮಾತನಾಡುತ್ತೇನೆ. ರೂಪಾಂತರಿ ಕೊರೊನಾ ಹೆಚ್ಚುತ್ತಿದೆ. ಅದರೆ, ಇಡೀ ರಾಜ್ಯದಲ್ಲಿ ಲಾಕ್ಡೌನ್ನ ಅವಶ್ಯಕತೆ ಇಲ್ಲ. ಸದ್ಯಕ್ಕೆ ಲಾಕ್ಡೌನ್ನ ಪ್ರಸ್ತಾವ ಸರ್ಕಾರದ ಮುಂದಿಲ್ಲ" ಎಂದು ತಿಳಿಸಿದ್ದಾರೆ.
"ರೂಪಾಂತರಿ ಕೊರೊನಾ ವೈರಸ್ ನಿರ್ದಿಷ್ಟ ಜಿಲ್ಲೆಗಳಲ್ಲಿ ಹೆಚ್ಚಿದ್ದ ಸಂದರ್ಭ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೇ, ಸೋಂಕು ಇರುವ ಜಿಲ್ಲೆಗಳಲ್ಲಿ ಲಾಕ್ಡೌನ್ ಜಾರಿ ಮಾಡಬೇಕಾ ಎನ್ನುವ ವಿಚಾರದ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು" ಎಂದರು.