ಬೆಂಗಳೂರು, ಡಿ.30 (DaijiworldNews/HR): ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಅವರು ಸದನದಲ್ಲಿ ನಡೆದಿದ್ದ ಗಲಾಟೆ ವಿಚಾರದಲ್ಲಿ ನೊಂದಿದ್ದರು ಹಾಗಾಗಿ ರಾಜಕೀಯ ವ್ಯವಸ್ಥೆಯಿಂದಲೇ ಅವರ ಕೊಲೆಯಾಗಿದೆ ಎಂದು ಜೆಡಿಎಸ್ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಸದನದಲ್ಲಿ ನಡೆದಿದ್ದ ಗಲಾಟೆ ವಿಚಾರದಲ್ಲಿ ತೀವ್ರವಾಗಿ ನೊಂದಿದ್ದ ಧರ್ಮೇಗೌಡ ಅವರಿಗೆ ನಾನು ಧೈರ್ಯ ತುಂಬಿದ್ದೆ. ಕಾನೂನು ಮತ್ತು ಸದನದ ನಿಯಮಗಳಿಗೆ ವಿರುದ್ಧವಾಗಿ ಯಾವುದೇ ಒತ್ತಡಗಳಿಗೆ ಮಣಿಯಬೇಡ ಎಂದು ದೇವೇಗೌಡರು ಕೂಡ ಸಲಹೆ ನೀಡಿದ್ದರು" ಎಂದರು.
ಇನ್ನು "ಅಂತಿಮವಾಗಿ ರಾಜಕೀಯ ವ್ಯವಸ್ಥೆಯಿಂದ ಧರ್ಮೇಗೌಡರ ಕೊಲೆಯಾಗಿದೆ, ಧರ್ಮೇಗೌಡ ನಿಜವಾದ ಅರ್ಥದಲ್ಲಿ ಧರ್ಮರಾಯ ಆಗಿದ್ದರು. ಅವರ ತಮ್ಮ ಭೋಜೇಗೌಡ ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತಿದ್ದರು. ಇವತ್ತಿನ ರಾಜಕಾರಣದ ಧರ್ಮರಾಯನನ್ನು ನಾನು ಕಳೆದುಕೊಂಡಿದ್ದೇನೆ" ಎಂದು ಹೇಳಿದ್ದಾರೆ.