ನವದೆಹಲಿ, ಡಿ. 30 (DaijiworldNews/MB) : ''ಪಾಕಿಸ್ತಾನವು ಚೀನಾ ನೀತಿಯ ಕೈಗೊಂಬೆಯಾಗಿದೆ'' ಎಂದು ಭಾರತೀಯ ವಾಯುಪಡೆಯ ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್. ಭದೌರಿಯಾ ಹೇಳಿದ್ದಾರೆ.
ವಿವೇಕಾನಂದ ಇಂಟರ್ನ್ಯಾಷನಲ್ ಫೌಂಡೇಷನ್ ಚಿಂತಕರ ಚಾವಡಿ (ಥಿಂಕ್-ಟ್ಯಾಂಕ್) ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
''ಪಾಕಿಸ್ತಾನವು ಚೀನಾದ ಮೇಲೆ ಅಧಿಕವಾಗಿ ಅವಲಂಬಿಸಿದ್ದು ಚೀನಾದ ಸಾಲದ ಬಲೆಗೆ ಬೀಳಲಿದೆ. ಚೀನಾದ ತಂತ್ರಗಾರಿಕೆ ಬಗ್ಗೆ ತಿಳಿದುಕೊಳ್ಳುವುದು ಭಾರತದ ಮುಂದಿರುವ ಬಹುದೊಡ್ಡ ಭದ್ರತಾ ಸವಾಲು'' ಎಂದು ಹೇಳಿದರು.
''ಅಫ್ಘಾನಿಸ್ತಾನದಿಂದ ಅಮೇರಿಕಾದ ಪಡೆಗಳನ್ನು ವಾಪಾಸ್ ಪಡೆದದ್ದು ಇಸ್ಲಾಮಾಬಾದ್ ಮೂಲಕ ಅಫ್ಘಾನ್ನಲ್ಲಿ ಪ್ರಭಾವವನ್ನು ವಿಸ್ತರಣೆ ಮಾಡಲು ಚೀನಾಗೆ ದಾರಿಮಾಡಿಕೊಟ್ಟಿದೆ. ಪಾಕಿಸ್ತಾನದ ಮೂಲಕ ಅಫ್ಘಾನ್ಗೆ ತಲುಪಲು ಚೀನಾಗೆ ಹೆಚ್ಚಿನ ಆಯ್ಕೆಗಳು ಲಭಿಸಿದೆ. ಇದು ಮಧ್ಯ ಏಷ್ಯಾಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಂತಿದೆ. ಚೀನಾವು ಈ ಪ್ರದೇಶದ ಮೇಲೆ ಬಹುಕಾಲದಿಂದ ಕಣ್ಣಿರಿಸಿದೆ'' ಎಂದು ಹೇಳಿದರು.
''ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ವಿಚಾರದಲ್ಲಿ ಪಾಕಿಸ್ತಾನವು ಚೀನಾದ ಬೋನಿನಲ್ಲಿ ಸಿಲುಕಿದೆ. ಭವಿಷ್ಯದಲ್ಲಿ ಪಾಕಿಸ್ತಾನವು ಮಿಲಿಟರಿಗೆ ಸಂಬಂಧಿಸಿ ಚೀನಾದ ಮೇಲೆಯೇ ಅವಲಂಬನೆಯಾಗಬೇಕಾಗುತ್ತದೆ'' ಎಂದರು.