ಮಂಗಳೂರು / ಉಡುಪಿ, ಡಿ. 30 (DaijiworldNews/MB) : ಕೊರೊನಾ ಸಾಂಕ್ರಾಮಿಕದ ಮಧ್ಯೆ, ಎರಡು ಹಂತಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ನಡೆದ 5,728 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಡಿಸೆಂಬರ್ 30 ಬುಧವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಯಿತು.
ಮಂಗಳೂರಿನಲ್ಲಿ ಬೋದೆಲ್ನ ಪ್ರೌಢ ಶಾಲೆಯಲ್ಲಿ ಮತ ಎಣಿಕೆ ಪ್ರಕ್ರಿಯೆಯು ಪ್ರಾರಂಭವಾದರೆ, ಉಡುಪಿಯಲ್ಲಿ ಸೇಂಟ್ ಸೆಸಿಲಿಯ ಸಂಸ್ಥೆ ಬ್ರಹ್ಮಗಿರಿಯಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ.
ಫಲಿತಾಂಶಗಳನ್ನು ರಾಜ್ಯ ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ - karsec.gov.in ಮತ್ತು ceokarnataka.kar.nic.in ನಲ್ಲಿ ನೋಡಬಹುದಾಗಿದೆ.
ಕರ್ನಾಟಕದ ಒಟ್ಟು 226 ತಾಲ್ಲೂಕುಗಳ 91,339 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಈ ಪೈಕಿ 8,074 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದ್ದು ಉಳಿದ 3,11,887 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮೊದಲ ಹಂತದಲ್ಲಿ 43,238 ಮತ್ತು ಎರಡನೇ ಹಂತದಲ್ಲಿ 39,378 ಸ್ಥಾನಗಳಿಗೆ ಮತದಾನ ನಡೆದಿತ್ತು. ಡಿ.22 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ 82.04 ರಷ್ಟು ಮತ್ತು ಡಿ.27 ರಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಶೇ 80.71 ರಷ್ಟು ಮತದಾನವಾಗಿತ್ತು.
ಪಕ್ಷದ ಚಿಹ್ನೆಯ ಆಧಾರದಲ್ಲಿ ಈ ಚುನಾವಣೆಗಳು ನಡೆಯದಿದ್ದರೂ ಸಹ, ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಿದ್ದಾರೆ. ಆಡಳಿತಾರೂಢ ಬಿಜೆಪಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತನ್ನ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ಮತ್ತು ಜೆಡಿ-ಎಸ್ ಗಿಂತ ಅಧಿಕ, ಸುಮಾರು ಶೇ. 80ರಷ್ಟು ಸ್ಥಾನಗಳನ್ನು ಗಳಿಸುವ ಉದ್ದೇಶದಿಂದ ಗ್ರಾಮ ಸ್ವರಾಜ್ ಅಭಿಯಾನವನ್ನು ನಡೆಸಿದೆ.
ಆಡಳಿತಾರೂಢ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರವೂ ಹೇಳಿದ್ದಾರೆ.
"ನನ್ನ ಮಾಹಿತಿಯ ಪ್ರಕಾರ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇ 85-90 ರಷ್ಟು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗುವುದು ಖಚಿತ" ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 6,004 ಗ್ರಾಮ ಪಂಚಾಯಿತಿಗಳಿದ್ದರೂ 5,762 ಕ್ಕೆ ಮಾತ್ರ ಚುನಾವಣೆ ನಡೆದಿದೆ. ವಿವಿಧ ಕಾನೂನು ಸಮಸ್ಯೆಗಳಿಂದಾಗಿ ಇತರ 242 ಪಂಚಾಯಿತಿಗಳ ಚುನಾವಣೆಯನ್ನು ಘೋಷಿಸಿಲ್ಲ.