ಮಂಗಳೂರು, ಡಿ. 29 (DaijiworldNews/SM): ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್(ಗೇಲ್) ಕೊಚ್ಚಿ ಮತ್ತು ಮಂಗಳೂರು ನಡುವೆ ಹಾಕಿರುವ ಗ್ಯಾಸ್ ಪೈಪ್ಲೈನ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆನ್ಲೈನ್ ಮೂಲಕ ಉದ್ಘಾಟಿಸಲಿದ್ದಾರೆ.
ಪೈಪ್ಲೈನ್ ಉದ್ಘಾಟಿಸಲು ರಾಜ್ಯ ಸರ್ಕಾರದ ಆಹ್ವಾನವನ್ನು ಪ್ರಧಾನಿ ಸ್ವೀಕರಿಸಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಜನವರಿ 5ರಂದು ವರ್ಚುವಲ್ ಕಾರ್ಯಕ್ರಮದ ಮೂಲಕ ಪ್ರಧಾನಿ ದೇಶಕ್ಕೆ ಪೈಪ್ಲೈನ್ ಅರ್ಪಿಸಲಿದ್ದಾರೆ ಎಂದು ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
444 ಕಿ.ಮೀ ಉದ್ದದ ಪೈಪ್ಲೈನ್ ಅಳವಡಿಸುವ ಕಾಮಗಾರಿ 2009 ರಲ್ಲಿ ಆರಂಭವಾಗಿತ್ತು. ಮೂಲ ಯೋಜನೆಗಳ ಪ್ರಕಾರ, 2,915 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಈ ಮಾರ್ಗವನ್ನು 2014ರ ವೇಳೆಗೆ ಪೂರ್ಣಗೊಳಿಸಬೇಕಾಗಿತ್ತು. ಆದರೆ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಅಗತ್ಯತೆಯಿಂದಾಗಿ, ಸ್ವಾಧೀನಪಡಿಸಿಕೊಂಡ ಭೂಮಿಯ ವೆಚ್ಚ ಹೆಚ್ಚಳ ಇತ್ಯಾದಿ ಕಾರಣಗಳಿಂದ ಯೋಜನೆ ವಿಳಂಬವಾಗಿದೆ. ಮತ್ತು ಯೋಜನೆಯ ವೆಚ್ಚವು 5,750 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.