ಭರೂಚ, ಡಿ. 29 (DaijiworldNews/MB) : ಬುಡಕಟ್ಟು ಸಮುದಾಯದ ನಾಯಕ ಗುಜರಾತ್ನ ಬಿಜೆಪಿ ಸಂಸದ ಮತ್ತು ಕೇಂದ್ರದ ಮಾಜಿ ಸಚಿವ ಮನ್ಸುಖ್ ವಾಸವ ಮಂಗಳವಾರ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
ಭರೂಚ ಕ್ಷೇತ್ರದಿಂದ ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಸಂಸದ ವಾಸವ ಅವರು ಬಿಜೆಪಿ ತೊರೆಯುವುದು ಮಾತ್ರವಲ್ಲದೇ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಸಂಸದನ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿಯೂ ತಿಳಿಸಿದ್ದಾರೆ.
ಈ ಬಗ್ಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸಿ.ಆರ್. ಪಾಟೀಲ್ಗೆ ಪತ್ರ ಬರೆದಿರುವ ಅವರು, ''ನನ್ನ ತಪ್ಪಿನಿಂದಾಗಿ ಪಕ್ಷದ ಘನತೆಗೆ ಚ್ಯುತಿ ಬಂದಿದೆ ಎಂಬ ಹಿನ್ನೆಲೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ಆದರೂ ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಮೌಲ್ಯಯುತವಾಗಿ ಜೀವಿಸುವ ಪ್ರಾಮಾಣಿಕ ಯತ್ನ ಮಾಡಿದ್ದೇನೆ. ಮನುಷ್ಯನಾದ ಮೇಲೆ ತಪ್ಪು ಸಹಜ. ನನ್ನ ತಪ್ಪಿನಿಂದ ಪಕ್ಷದ ಘನತೆಗೆ ಧಕ್ಕೆ ಉಂಟಾಗಬಾರದು'' ಎಂದು ಹೇಳಿದ್ದಾರೆ.
ಇನ್ನು ಬಿಜೆಪಿ ರಾಜ್ಯ ಘಟಕದ ವಕ್ತಾರ ಭರತ್ ಪಾಂಡ್ಯ ಅವರು, ''ಸಾಮಾಜಿಕ ಜಾಲತಾಣಗಳ ಮೂಲಕ ವಾಸವ ಅವರ ರಾಜೀನಾಮೆ ಪತ್ರ ತಲುಪಿದೆ. ಯಾವ ಸಮಸ್ಯೆಯಿದ್ದರೂ ಪರಿಹರಿಸುವುದಾಗಿ ನಾನು ಅವರಿಗೆ ತಿಳಿಸಿದ್ದೇನೆ'' ಎಂದು ಹೇಳಿದ್ದಾರೆ.