ತಿರುವನಂತಪುರಂ, ಡಿ. 29 (DaijiworldNews/MB) : ಭಾರತ ತನ್ನ ಕ್ಷಮತೆಯಿಂದ ಕೊರೊನಾ ಸಾಂಕ್ರಾಮಿಕವನ್ನು ಎದುರಿಸಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ನಾಯಕ ಮೋಹನ್ ಭಾಗವತ್ ಮಂಗಳವಾರ ಹೇಳಿದರು.
ಕೋಝಿಕೋಡ್ನಲ್ಲಿ 'ಕೇಸರಿ ಭವನ' ಉದ್ಘಾಟಿಸಿ ಮಾತನಾಡಿದ ಅವರು, "ನಂಬಿಕೆಯೆಂಬುವುದು ಇದ್ದರೆ ಯಾವುದೇ ಬಿಕ್ಕಟ್ಟಿನ ಪರಿಸ್ಥಿತಿಯನ್ನು ನಿವಾರಿಸಬಹುದು. ಅದನ್ನು ಆರ್ಎಸ್ಎಸ್ ಅನೇಕ ಸಂದರ್ಭಗಳಲ್ಲಿ ಸಾಬೀತುಪಡಿಸಿದೆ" ಎಂದು
''ಜನರು ಯಾವುದೇ ಸಂದರ್ಭದಲ್ಲಿ ಸಮಾಜವನ್ನು ಬೆಂಬಲಿಸಲು ಶ್ರಮಿಸಬೇಕು'' ಎಂದು ಹೇಳಿದ ಅವರು, ''ಕೊರೊನಾ ಸವಾಲಿನ ಎದುರು ಭಾರತೀಯ ಸಮಾಜ ಒಂದಾಗಿ ಹೋರಾಡಿದೆ, ಜಯ ಸಾಧಿಸುತ್ತದೆ'' ಎಂದು ಹೇಳಿದರು.
''ಆರ್ಎಸ್ಎಸ್ ಭಾರತೀಯ ಸಮಾಜಕ್ಕೆ ದೊಡ್ಡ ಪ್ರೇರಕ ಶಕ್ತಿಯಾಗಲಿದೆ'' ಎಂದು ಕೂಡಾ ಅವರು ಈ ಸಂದರ್ಭದಲ್ಲೇ ಹೇಳಿದರು.
ಹಾಗೆಯೇ ಆರ್ಎಸ್ಎಸ್ನ ಮಲಯಾಳಂ ಭಾಷೆಯ ಮುಖವಾಣಿಯಾದ ಕೇಸರಿ ಈಗ ತಲುಪಿದ ಮಟ್ಟಕ್ಕೆ ಸಂಘಟನೆಯ ಕಾರ್ಯಕರ್ತರ ತ್ಯಾಗ ಮತ್ತು ಕಠಿಣ ಪರಿಶ್ರಮದ ಫಲ ಎಂದು ಶ್ಲಾಘಿಸಿದರು.
ಆರ್ಎಸ್ಎಸ್ನ ಮಲಯಾಳಂ ಮುಖವಾಣಿಯಾದ 'ಕೇಸರಿ'ಯ ಪ್ರಧಾನ ಕಛೇರಿಯಾಗಿ ಕೇಸರಿ ಭವನ ಕಾರ್ಯನಿರ್ವಹಿಸಲಿದೆ. ಈ ಕಟ್ಟಡದಲ್ಲಿ ಭಾರತೀಯ ವಿಚಾರ ಕೇಂದ್ರ, ಬಿಜೆಪಿ ಮುಖವಾಣಿ ತಪಸ್ಯ, ಜನ್ಮಭೂಮಿ ಮತ್ತು ಮಾಧ್ಯಮ ಶಾಲೆ ಮತ್ತು ಸಂಶೋಧನಾ ಕೇಂದ್ರಗಳು ಕೂಡಾ ಇವೆ.
ಕುಲತೂರು ಮಠದ ಮುಖ್ಯಸ್ಥ ಸ್ವಾಮಿ ಚಿದಾನಂದಪುರಿ ಮತ್ತು ಮಾಜಿ ಮಾತೃಭೂಮಿ ಸಂಪಾದಕ ಕೇಶವ ಮೆನನ್, ಆರ್ಎಸ್ಎಸ್ ಮುಖಂಡರಾದ ಹರಿಕೃಷ್ಣಕುಮಾರ್, ಜೆ.ನಂದಕುಮಾರ್, ಸುದರ್ಶನ್ ಮತ್ತು ಆರ್ ಹರಿ ಉಪಸ್ಥಿತರಿದ್ದರು.
ಭಾಗವತ್ ಅವರು ಬುಧವಾರ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಇಲ್ಲಿನ ರಾಜ ಭವನದಲ್ಲಿ ಭೇಟಿಯಾಗಲಿದ್ದಾರೆ. ಆರ್ಎಸ್ಎಸ್ನ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿಯೂ ಭಾಗವಹಿಸಲಿದ್ದಾರೆ. ಬಳಿಕ ಡಿಸೆಂಬರ್ 31 ರಂದು ನಾಗ್ಪುರಕ್ಕೆ ತೆರಳಲಿದ್ದಾರೆ.