ಬೆಂಗಳೂರು, ಡಿ.29(DaijiworldNews/HR): ರೂಪಾಂತರ ಸೋಂಕು ತಡೆಯಲು ಎಲ್ಲಾ ಮುಂಜಾಗ್ರತೆ ಕ್ರಮ ಕೈಗೊಂಡಿದ್ದು, ಯಾವುದೇ ಸಮಸ್ಯೆಯಾಗವುದಿಲ್ಲ ಹಾಗಾಗಿ ಲಾಕ್ಡೌನ್, ಸೀಲ್ಡೌನ್ ಅಗತ್ಯವಿಲ್ಲ, ಶಾಲೆ, ಕಾಲೇಜು ಆರಂಭಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, " ಇಂಗ್ಲೆಂಡಿನಿಂದ ಈವರೆಗೆ ಬಂದು ಕೊರೊನಾ ಪಾಸಿಟಿವ್ ಬಂದವರ ವಂಶವಾಹಿನಿ ಪರೀಕ್ಷೆ ಮಾಡಲಾಗಿತ್ತು. ಬೆಂಗಳೂರಿನ ತಾಯಿ ಮತ್ತು ಮಗು ಸೇರಿದಂತೆ ಮೂವರಲ್ಲಿ ರೂಪಾಂತರ ಕೊರೊನಾ ದೃಢಪಟ್ಟಿದೆ. 28 ದಿನಗಳ ಕಾಲ ಐಸೋಲೇಷನ್ ಮಾಡಲಾಗುತ್ತದೆ. ಇವರ ಪ್ರಾಥಮಿಕ, ದ್ವಿತೀಯ ಸಂಪರ್ಕವನ್ನು ಪತ್ತೆ ಮಾಡಿ ಆರೋಗ್ಯ ನಿಗಾವಹಿಸಲಾಗಿದೆ" ಎಂದರು.
ಇನ್ನು "ಇಂಗ್ಲೆಂಡ್ನಿಂದ ಬಂದು ಪರೀಕ್ಷೆಗೊಳಗಾಗದೇ ಬಾಕಿ ಉಳಿದಿರುವ ಪ್ರಯಾಣಿಕರನ್ನು ಪತ್ತೆಗೆ ಗೃಹ ಇಲಾಖೆ ಸಹಕಾರ ನೀಡಿದ್ದು, ಅನೇಕರು ಪೋನ್ ಆಫ್ ಮಾಡಿದ್ದಾರೆ. ಮುಂದಿನ 48 ಗಂಟೆಯಲ್ಲಿ ಪತ್ತೆ ಮಾಡಲಾಗುತ್ತದೆ ಎಂದು ಗೃಹ ಇಲಾಖೆ ಭರವಸೆ ನೀಡಿದೆ" ಎಂದು ಹೇಳಿದ್ದಾರೆ.