ಬೆಂಗಳೂರು,ಡಿ.29(DaijiworldNews/HR): ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಗುಣಸಾಗರ ಬಳಿಯ ರೈಲು ಹಳಿಯಲ್ಲಿ ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಅವರ ಮೃತದೇಹ ಪತ್ತೆಯಾಗಿದ್ದು, ಅವರು ಆತ್ಮಹತ್ಯೆಗೆ ಮುಂದಾಗಿದ್ದನ್ನು ನಂಬಲಾಗುತ್ತಿಲ್ಲ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಧರ್ಮೇಗೌಡರ ಮತ್ತು ನಮ್ಮ ಕುಟುಂಬಕ್ಕೂ ಆತ್ಮೀಯತೆ ಇತ್ತು. ಧರ್ಮೇಗೌಡರ ತಂದೆ ಮತ್ತು ನಮ್ಮ ತಂದೆ ತಾಲ್ಲೂಕು ಬೋರ್ಡ್ ಸದಸ್ಯರಾಗಿದ್ದರು. ಆ ಸಮಯದಿಂದಲೇ ಧರ್ಮೇಗೌಡರು ರಾಜಕೀಯವಾಗಿ ಬೆಳೆಯೋದನ್ನ ನಾನು ನೋಡಿಕೊಂಡು ಬಂದಿದ್ದೇನೆ" ಎಂದರು.
ಇನ್ನು "ಉಪಸಭಾಪತಿ ಗಲಭೆಗೆ ಕೆಲವೇ ದಿನಗಳ ಹಿಂದೆ ಕಡೂರು ಕ್ಷೇತ್ರದ ಹಾಲಿನ ಡೈರಿಗಳ ಸಮಸ್ಯೆಗಳ ಬಗ್ಗೆ ಹಾಗೂ ಪಕ್ಷ ಸಂಘಟನೆಯ ಬಗ್ಗೆ ಚರ್ಚೆ ನಡೆಸಿದ್ದೆ. ಈಗ ಧರ್ಮೇಗೌಡ್ರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ ಮತ್ತು ಆ ಕುಟುಂಬಕ್ಕೆ ಧೈರ್ಯ ತುಂಬುವ ನಿಟ್ಟಿನಲ್ಲಿ ಸಖರಾಯಪಟ್ಟಣದ ಅವರ ತೋಟದ ಮನೆಗೆ ಪ್ರಯಾಣ ಬೆಳೆಸುತ್ತಿದ್ದೇನೆ" ಎಂದರು.
"ಧರ್ಮೇಗೌಡರದ್ದು ಯಾವುದಕ್ಕೂ ಅಂಜದೇ ಇರುವ ವ್ಯಕ್ತಿತ್ವ ಅಷ್ಟೇ ಧೈರ್ಯಶಾಲಿ, ಮಾತು ಒರಟಾದರೂ ಕೂಡ ಒಳ್ಳೆಯ ಹೃದಯವಂತ. ರಾಜಕೀಯದಲ್ಲಾಗಲಿ ಅಥವಾ ಹೋರಾಟಗಳಲ್ಲಾಗಲಿ ಧೈರ್ಯ ಕಳೆದುಕೊಳ್ಳದೇ ಮುನ್ನುಗ್ಗುತ್ತಿದ್ದ ನನ್ನ ಆತ್ಮೀಯ ಗೆಳೆಯ ಧರ್ಮೇಗೌಡ್ರು ಆತ್ಮಹತ್ಯೆಗೆ ಮುಂದಾಗಿದ್ದು ನನಗೆ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ್ದಾರೆ.