ಬೆಂಗಳೂರು, ಡಿ. 29 (DaijiworldNews/MB) : ಬ್ರಿಟನ್ನಿಂದ ಭಾರತಕ್ಕೆ ಮರಳಿದ 6 ಮಂದಿಯಲ್ಲಿ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದ್ದು ಭಾರತದಲ್ಲಿ ಇದೇ ಮೊದಲ ಬಾರಿಗೆ ಹೊಸ ಮಾದರಿಯ ಕೊರೊನಾ ವೈರಸ್ ಪತ್ತೆಯಾಗಿದೆ.
ಆರು ಸೋಂಕಿತರ ಪೈಕಿ ಬೆಂಗಳೂರಿನಲ್ಲೇ ಮೂವರಿದ್ದಾರೆ. ಎರಡು ಪ್ರಕರಣಗಳು ಹೈದರಾಬಾದ್ನಲ್ಲಿ, ಒಂದು ಪ್ರಕರಣ ಪುಣೆಯಲ್ಲಿ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯ ಸರ್ಕಾರ ನಿಗದಿಪಡಿಸಿದ ಆರೋಗ್ಯ ವ್ಯವಸ್ಥೆಯಂತೆ ಈ ಎಲ್ಲಾ ರೋಗಿಗಳನ್ನು ಒಂದು ಕೋಣೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಅವರ ನಿಕಟ ಸಂಪರ್ಕಕ್ಕೆ ಬಂದವರನ್ನು ಕೂಡಾ ಕ್ವಾರಂಟೈನ್ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಹಾಗೆಯೇ ಅವರ ಸಹ ಪ್ರಯಾಣಿಕರು, ಕುಟುಂಬದಲ್ಲಿ ಸಂಪರ್ಕಕ್ಕೆ ಬಂದವರು ಹಾಗೂ ಇತರರು ಸೇರಿದಂತೆ ಒಟ್ಟು ಸಂಪರ್ಕ ಪತ್ತೆಹಚ್ಚುವಿಕೆ ಕಾರ್ಯ ಆರಂಭಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಈ ಹಿಂದೆ ಪತ್ತೆಯಾಗಿದ್ದ ಕೊರೊನಾ ವೈರಸ್ಗಿಂತಲೂ ಈ ವೈರಸ್ ಶೇ. 70ರಷ್ಟು ಅಧಿಕ ಸಾಂಕ್ರಾಮಿಕವಾಗಿ ಹರಡುತ್ತದೆ ಎನ್ನಲಾಗಿದೆ.
ಪ್ರಸ್ತುತ ಬ್ರಿಟನ್ನಲ್ಲಿ ಈ ವೈರಸ್ ವ್ಯಾಪಕವಾಗಿ ಹರಡಿದ್ದು, ಪರಿಸ್ಥಿತಿ ಕೈ ಮೀರುತ್ತಿದೆ ಎಂದು ಈಗಾಗಲೇ ಬ್ರಿಟನ್ ಸರ್ಕಾರ ತಿಳಿಸಿದೆ.