ವಿಜಯವಾಡ, ಡಿ. 29 (DaijiworldNews/MB) : ನಿವಾರ್ ಚಂಡಮಾರುತದಿಂದ ಬೆಳೆ ನಷ್ಟವಾದ ರೈತರಿಗೆ ಪ್ರತಿ ಎಕರೆಗೆ 35 ಸಾವಿರ ರೂ. ಪರಿಹಾರ ನೀಡಬೇಕೆಂದು ಆಂಧ್ರ ಪ್ರದೇಶ ಸರ್ಕಾರವನ್ನು ಒತ್ತಾಯಿಸಿರುವ ಜನ ಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್, ರೈತರಿಗೆ ಪರಿಹಾರ ನೀಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪವನ್ ಕಲ್ಯಾಣ್ ಅವರು ನಷ್ಟ ಅನುಭವಿಸುತ್ತಿರುವ ಪರಿಹಾರ ಕೋರಿ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮಚಲಿಪಟ್ಟಣಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವನ್ ಕಲ್ಯಾಣ್ ಅವರು, ''ಮುಂದಿನ ಬಜೆಟ್ ಅಧಿವೇಶನಕ್ಕೂ ಮೊದಲು ರೈತರಿಗೆ ಸರ್ಕಾರ ಪರಿಹಾರ ನೀಡದಿದ್ದರೆ, ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ರಾಜ್ಯ ಸಂಪುಟಕ್ಕೆ ಮುತ್ತಿಗೆ ಹಾಕುತ್ತೇವೆ. ನಾವು ಚುನಾವಣೆಯಲ್ಲಿ ಸೋಲು ಕಂಡ ಹಿನ್ನೆಲೆ ಭಯದಿಂದ ಓಡಿಹೋಗುತ್ತೇವೆ ಎಂಬ ಭ್ರಮೆಯಲ್ಲಿ ಕೆಲವರಿದ್ದಾರೆ. ಮಹತ್ವಾಕಾಂಕ್ಷೆ ಹೊಂದಿರುವ ಜನರಿಗೆ ಯಾವುದೇ ಸೋಲಿಲ್ಲ'' ಎಂದು ಹೇಳಿದರು.
ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಪಯಣದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ಗ್ಯಾಮ್ಲಿಂಗ್ ಮಾಡುವಂತಹ ವ್ಯಕ್ತಿಗಳು ರಾಜಕೀಯದಲ್ಲಿ ಇರುವಾಗ ಸಿನಿಮಾದಲ್ಲಿರುವ ವ್ಯಕ್ತಿಗಳು ಪ್ರಾಮಾಣಿಕವಾಗಿ ರಾಜಕೀಯದಲ್ಲಿಯೂ ಇದ್ದರೆ ಏನು ಸಮಸ್ಯೆ'' ಎಂದು ಪ್ರಶ್ನಿಸಿದರು.