ಬೆಂಗಳೂರು, ಡಿ. 29 (DaijiworldNews/MB) : ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ಅವರು ಕಡೂರು ತಾಲೂಕಿನ ಗುಣಸಾಗರ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ನಿಧನದ ಸುದ್ದಿ ದಿಗ್ಭ್ರಮೆ ಮೂಡಿಸಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ವಿಧಾನಪರಿಷತ್ ಉಪಸಭಾಪತಿ ಶ್ರೀ ಎಸ್.ಎಲ್.ಧರ್ಮೇಗೌಡರ ನಿಧನದ ಸುದ್ದಿ ದಿಗ್ಭ್ರಮೆ ಮೂಡಿಸಿದೆ. ಇದನ್ನು ನಂಬಲಿಕ್ಕೇ ಸಾಧ್ಯವಾಗುತ್ತಿಲ್ಲ. ಶಾಸಕರಾಗಿ, ಉಪಸಭಾಪತಿಗಳಾಗಿ ಜನಮನ್ನಣೆ ಗಳಿಸಿದ್ದ ಅವರ ದುರಂತ ಅಂತ್ಯ ಅತ್ಯಂತ ದುಃಖವನ್ನುಂಟು ಮಾಡಿದೆ. ಹಿರಿಯ ಅಧಿಕಾರಿಗಳಿಂದ ಘಟನೆಯ ವಿವರ ಪಡೆದುಕೊಳ್ಳುತ್ತಿದ್ದೇನೆ'' ಎಂದು ತಿಳಿಸಿದ್ದಾರೆ.
''ಅವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ, ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ'' ಎಂದಿದ್ದಾರೆ.
ಇನ್ನು ಎಸ್.ಎಲ್.ಧರ್ಮೇಗೌಡರ ಸಾವಿಗೆ ಹಲವು ನಾಯಕರು ಸಂತಾಪ ಹಾಗೂ ಆಘಾತ ವ್ಯಕ್ತಪಡಿಸಿದ್ದಾರೆ.